ನಮ್ಮ ಕುಟುಂಬ ದ್ವೇಷದ ರಾಜಕಾರಣ ಮಾಡಿಲ್ಲ: ನಿಖಿಲ್

Update: 2019-04-24 18:27 GMT

ಮಂಡ್ಯ, ಎ.24: ನಮ್ಮ ಕುಟುಂಬ ದ್ವೇಷದ ರಾಜಕಾರಣ ಮಾಡಿಲ್ಲ. ಸುಮಲತಾ ಅಂಬರೀಷ್ ಅವರ ಮಾತಿಗೆ ಹಿಂದೆಯೂ ಪ್ರತಿಕ್ರಿಯಿಸಿಲ್ಲ, ಮುಂದೆಯೂ ಪ್ರತಿಕ್ರಿಯಿಸುವುದಿಲ್ಲ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ತಮ್ಮ ಬೆಂಬಲಿಗರನ್ನು ಮುಖ್ಯಮಂತ್ರಿಗಳು ಟಾರ್ಗೆಟ್ ಮಾಡುತ್ತಿದ್ದಾರೆಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಆರೋಪಕ್ಕೆ ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ನಿಖಿಲ್, ಮುಖ್ಯಮಂತ್ರಿಗಳಿಗೆ ಅವರದೇ ಕೆಲಸ ಇರುತ್ತೆ. ಟಾರ್ಗೆಟ್ ಮಾಡಿ ಟೈಂ ವೇಸ್ಟ್ ಮಾಡಲು ರೆಡಿಯಿಲ್ಲ ಎಂದರು.

ನಾನು ನಾಮಪತ್ರ ಸಲ್ಲಿಸುವ ದಿನ ಲಕ್ಷಕ್ಕಿಂತಲೂ ಅಧಿಕ ಜನರಿದ್ದರು. ಆದರೆ, ಸುಮಲತಾ ಅವರು ಜನರಿಗೆ ಹಣ ಕೊಟ್ಟು ಕರೆಸಿದ್ದಾರೆ ಎನ್ನುತ್ತಾರೆ. ಮತ್ತೊಂದೆಡೆ ಸ್ವಾಭಿಮಾನಕ್ಕೆ ಮತ ಹಾಕಿ ಅಂತಾರೆ. ವ್ಯಕ್ತಿ ಯಾವತ್ತೂ ಒಂದು ವಿಚಾರಕ್ಕೆ ಸ್ಟಿಕನ್ ಆಗಿರಬೇಕು. ಏನೇನೋ ಹೇಳಬಾರದು ಎಂದು ಅವರು ವ್ಯಂಗ್ಯವಾಡಿದರು.

ಈತನಿಗೆ ಏನು ಅನುಭವ ಇದೆ ಎಂದು ಟೀಕೆ ಮಾಡುತ್ತಿದ್ದರು. ಆದರೆ, ಈ ಚುನಾವಣೆ ನನಗೆ ಅದ್ಭುತವಾದ ಅನುಭವ ನೀಡಿದೆ. ಪ್ರಚಾರದ ಈ ಒಂದು ತಿಂಗಳಲ್ಲಿ ಹಳ್ಳಿಗಳನ್ನು ಸುತ್ತಾಡಿ ಜನರ ಸಾಕಷ್ಟು ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.

ತನ್ನನ್ನು ಬೆಂಬಲಿಸದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮದ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ನಿಖಿಲ್, ವರಿಷ್ಠರು ಮೈತ್ರಿ ಗೊಂದಲ ನಿವಾರಿಸಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಬೆಂಬಲದಿಂದ ಚುನಾವಣೆ ಎದುರಿಸಿದ್ದೇನೆ. ಗೆಲ್ಲುವ ವಿಶ್ವಾಸವಿದೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಮಂಡ್ಯದಲ್ಲಿ ಜಮೀನು ಖರೀದಿ ವಿಚಾರ ಹೇಳಿದ್ದು ನಿಜ. ಆದರೆ, ಅದು ಎರಡು ಮೂರು ದಿನದ ಕೆಲಸವಲ್ಲ. ನಾಲ್ಕೈದು ತಿಂಗಳು ಬೇಕು. ಬಜೆಟ್‍ನಲ್ಲಿ ಜಿಲ್ಲೆಗೆ ಹೆಚ್ಚು ಅನುದಾನ ನೀಡಿದ್ದಾರೆ. ಅದನ್ನು ಅನುಷ್ಠಾನಕ್ಕೆ ತರಲು ಗಮನಹರಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.

ಫಲಿತಾಂಶದ ಕುರಿತಂತೆ ಜಿಲ್ಲೆಯಲ್ಲಿ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದೆ. ಆದರೆ, ಬೆಟ್ಟಿಂಗ್ ಒಳ್ಳೆಯ ಬೆಳವಣಿಗೆಯಲ್ಲ. ಯಾರು ಸಹ ಬೆಟ್ಟಿಂಗ್ ಕಟ್ಟಬಾರದು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News