ಮಡಿಕೇರಿಯಲ್ಲಿ ಇಬ್ಬರು ಶಂಕಿತ ನಕ್ಸಲರು ಪ್ರತ್ಯಕ್ಷ: ಕೂಂಬಿಂಗ್ ಕಾರ್ಯಾಚರಣೆ ಚುರುಕು

Update: 2019-04-25 12:40 GMT

ಮಡಿಕೇರಿ ,ಎ.25: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದ ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಕೆಲವು ಗ್ರಾಮಸ್ಥರ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು ಅಕ್ಕಿ ಮತ್ತು ಮೊಬೈಲ್ ಫೋನ್‍ನೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಅತಿ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟ ತಪ್ಪಲಿನ ಯವಕಪಾಡಿ ಗ್ರಾಮದಲ್ಲಿ ಇಬ್ಬರು ಶಂಕಿತ ನಕ್ಸಲರು ಮನೆಯೊಂದರಿಂದ ಅಕ್ಕಿ ಹಾಗೂ ಮಹಿಳೆಯೊಬ್ಬರಿಂದ ಮೊಬೈಲ್ ಕಸಿದುಕೊಂಡು ನಂತರ ಮೊಬೈಲ್‍ನ್ನು ಸ್ವಲ್ಪ ದೂರದಲ್ಲಿ ಎಸೆದು ತೆರಳಿರುವ ಘಟನೆ ನಡೆದಿದೆ. 

ಗುರುವಾರ ಬೆಳಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಯುವಕಪಾಡಿ ಗ್ರಾಮದ ಕಾರ್ಯಪ್ಪ ಎಂಬುವರ ಪತ್ನಿ ಕೆ.ಕೆ.ಅನಿತಾ ಅವರು ಮಕ್ಕಳೊಂದಿಗೆ ಮನೆಯಲ್ಲಿದ್ದರು. ಪತಿ ಕಾರ್ಯಪ್ಪ ಅವರಿಗೆ ಫೋನ್ ಮಾಡುವ ಉದ್ದೇಶದಿಂದ ಮನೆಯ ಅಂಗಳಕ್ಕೆ ಬಂದ ಸಂದರ್ಭ ತಮ್ಮ ಮನೆ ಬಳಿಯ ಕಾಫಿತೋಟದ ಗಿಡಗಳ ಮರೆಯಿಂದ ಚೂಡಿದಾರ್ ಹಾಗೂ ಓವರ್ ಕೋಟ್ ಧರಿಸಿದ್ದ ಸುಮಾರು 40 ವರ್ಷ ಪ್ರಾಯದ ಮಹಿಳೆಯೊಬ್ಬರು  ಹಾಗೂ ಕಪ್ಪುಬಣ್ಣದ ಜರ್ಕಿನ್ ಮತ್ತು ಕೈಯಲ್ಲಿ ಕಪ್ಪುಬಣ್ಣದ ಬ್ಯಾಗ್ ಹಿಡಿದಿದ್ದ ಪುರುಷ ಇದ್ದಕ್ಕಿದ್ದಂತೆ ಹೊರಬಂದಿದ್ದಾರೆ. 

ತಕ್ಷಣ ಮಹಿಳೆ ಅನಿತಾ ಅವರ ಬಳಿಯಿಂದ ಮೊಬೈಲ್ ಕಸಿದುಕೊಂಡು ಯಾರಿಗಾದರು ಮಾಹಿತಿ ನೀಡಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಮತ್ತು ಮೊಬೈಲ್‍ನ್ನು ಸ್ವಲ್ಪ ದೂರದಲ್ಲಿ ಎಸೆದು ಹೋಗಿದ್ದಾರೆ. ಬಳಿಕ ಗ್ರಾಮದ ಕುಟ್ಟಪ್ಪ ಹಾಗೂ ಪ್ರೇಮ ದಂಪತಿಯ ಪುತ್ರ ರಾಜೇಶ್ ಎಂಬುವರ ಮನೆಗೆ ತೆರಳಿದ ಇಬ್ಬರು ಶಂಕಿತ ನಕ್ಸಲರು ಅಕ್ಕಿಯನ್ನು ಪಡೆದು ತೆರಳಿದ್ದಾರೆ. ಈ ಸಂದರ್ಭ ಅನಿತಾ ಅವರ ಪತಿ ಕಾರ್ಯಪ್ಪ, ಮಾವ ಅರ್ಜುನ,  ಅತ್ತೆ ಪೂವಮ್ಮ ಹಾಗೂ ಬಾವಂದಿರಾದ ಕುಶಾಲಪ್ಪ ಮತ್ತು ಪೊನ್ನಪ್ಪ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.  

ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕರಾದ ಸಿದ್ದಯ್ಯ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರೇಣುಕಾ ಪ್ರಸಾದ್, ಸಹಾಯಕ ಸಬ್ ಇನ್ಸ್‍ಪೆಕ್ಟರ್ ದೇವರಾಜ್, ಸಿಬ್ಬಂದಿಗಳಾದ ನವೀನ್, ಶರತ್, ಚಾಲಕ ಬಶೀರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಯುವಕಪಾಡಿ ಗ್ರಾಮಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿ, ಅಕ್ಕಿಯನ್ನು ಪಡೆದುಕೊಂಡು ತೆರಳಿರುವುದು ಹಾಗೂ ಗೃಹಿಣಿಯೋರ್ವರಿಗೆ ಹತ್ಯೆ ಬೆದರಿಕೆ ಒಡ್ಡಿರುವ ಘಟನೆಗೆ ಬುಡಕಟ್ಟು ಕೃಷಿಕರ ಸಂಘದ ಮುಖಂಡ ಕುಡಿಯರ ಮುತ್ತಪ್ಪ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಸುತ್ತಮುತ್ತಲ ಗ್ರಾಮದಲ್ಲೂ ಭಯದ ವಾತಾವರಣ ಮೂಡಿದ್ದು, ನಕ್ಸಲ್ ನಿಗ್ರಹ ದಳ ಮತ್ತು ಕೊಡಗು ಜಿಲ್ಲಾ ಪೊಲೀಸರು ಇಬ್ಬರು ಶಂಕಿತ ನಕ್ಸಲರು ಪರಾರಿಯಾದ ಮಾರ್ಗದಲ್ಲೇ ತೆರಳಿ ತೀವ್ರ ತಪಾಸಣೆ ನಡೆಸಿದ್ದಾರೆ. ಕೂಂಬಿಂಗ್ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News