ಜಗತ್ತಿನ ಶಾಂತಿಗೆ ಅಡ್ಡಿಯಾಗಿರುವ ಮುಸ್ಲಿಂ ಭಯೋತ್ಪಾಧನೆಯನ್ನು ಕಿತ್ತೊಗೆಯಿರಿ: ಸೊಗಡು ಶಿವಣ್ಣ

Update: 2019-04-25 12:15 GMT

ತುಮಕೂರು.ಏ.25: ಪ್ರಪಂಚದಲ್ಲಿ ಶಾಂತಿ ನೆಲೆಸಲು ಅಡ್ಡಿಯಾಗಿರುವ ಮುಸ್ಲಿಂ ಭಯೋತ್ಪಾಧನೆಯನ್ನು ಬೇರು ಸಮೇತ ಕಿತ್ತೊಗೆಯುವಂತೆ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಸ್.ಶಿವಣ್ಣ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ ಕುಟುಂಬದ ರೋಧನೆಗಳನ್ನು ನೋಡಿದರೆ ರಕ್ತ ಕುದಿಯುತ್ತದೆ. ಇದಕ್ಕೆ ಕಾರಣವಾಗಿರುವ ಐಸಿಎಸ್ ನಂತಹ ಮುಸ್ಲಿಂ ಭಯೋತ್ಪಾಧಕ ಸಂಘಟನೆಗಳನ್ನು ಹೇಳ ಹೆಸರಿಲ್ಲದ ನಿರ್ನಾಮ ಮಾಡುವ ಕಾರ್ಯವನ್ನು ವಿಶ್ವಸಂಸ್ಥೆ ಸೇರಿದಂತೆ, ಪ್ರಪಂಚದ ಮಂಚೂಣಿ ರಾಷ್ಟ್ರಗಳು ಕೈಗೊಳ್ಳಬೇಕೆಂದರು.

ನ್ಯೂಝಿಲಾಂಡ್ ನ ಮಸೀದಿಯ ಮೇಲೆ ನಡೆದ ಬಾಂಬ್ ದಾಳಿಗೆ ಪ್ರತಿಕಾರವಾಗಿ ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟಿಸಿರುವುದಾಗಿ ಐಸಿಎಸ್ ಸಂಘಟನೆ ಒಪ್ಪಿಕೊಂಡಿದೆ. ಪ್ರಪಂಚದ ಯಾವುದೇ ಧರ್ಮಗಳು ಹಿಂಸೆಯನ್ನು ಬೋಧಿಸಿಲ್ಲ. ಆದರೆ ಹಿಂಸೆಯ ಮೂಲಕ ಸೇಡು ತೀರಿಸಿಕೊಳ್ಳಲು ಹೊರಟಿರುವ ಇಂತಹ ಸಂಘಟನೆಗಳನ್ನು ಮಟ್ಟ ಹಾಕದಿದ್ದರೆ, ಭಾರತದಂತಹ ಜಾತ್ಯಾತೀತ ರಾಷ್ಟ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿ, ಹಿಂದೂಗಳೊಂದಿಗೆ ಅಂತರಿಕ ಯುದ್ದಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಸೊಗಡು ಶಿವಣ್ಣ ನುಡಿದರು.

ಭಾರತ ಸೇರಿದಂತೆ ಪ್ರಪಂಚದ ಯಾವುದೇ ರಾಷ್ಟ್ರದಲ್ಲಿಯೂ ಮುಸ್ಲಿಂ ಭಯೋತ್ಪಾಧಕರನ್ನು ಮುಸ್ಲಿಮರು ಹಿಡಿದುಕೊಟ್ಟ ಉದಾಹರಣೆಗಳಿಲ್ಲ. ಬೆಂಬಲಿಸಿರುವ, ರಕ್ಷಣೆ ನೀಡಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನು ಮುಂದಾದರೂ ಮುಸ್ಲಿಮರು ಎಲ್ಲಿ ನೆಲೆಸಿದ್ದಾರೋ, ಅಲ್ಲಿನ ರಾಷ್ಟ್ರದ ಪರವಾಗಿ ನಡೆದುಕೊಂಡರೆ ಅವರಿಗೆ ಉಳಿಗಾಲವಿದೆ ಎಂಬುದನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ತೋರಿಸಬೇಕಿದೆ. ಇಲ್ಲದಿದ್ದಲ್ಲಿ ಮುಂದೊಂದು ದಿನ ಮುಸ್ಲಿಂ ಭಯೋತ್ಪಾಧಕರ ಮುಂದೆ ಮಂಡಿಯೂರಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಶಿವಣ್ಣ ಎಚ್ಚರಿಸಿದರು.

ಶ್ರೀಲಂಕಾದಲ್ಲಿ ನಡೆದ ಬಾಂಬ್ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಕರ್ನಾಟಕದ ಜನರಿಗೆ ರಾಜ್ಯ ಸರಕಾರ ಕೂಡಲೇ ಪರಿಹಾರ ಘೋಷಿಸಬೇಕು. ಜನರೇ ದೇಣಿಗೆಯಾಗಿ ನೀಡಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಐವತ್ತು ಲಕ್ಷ ರೂ ಪರಿಹಾರ ನೀಡಿದರೆ, ಕುಟುಂಬದಲ್ಲಿ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಅವರ ಅವಲಂಬಿತರಿಗೆ ಅರ್ಥಿಕ ಸಹಾಯ ಮಾಡಿದಂತಾಗುತ್ತದೆ ಎಂದು ಸೊಗಡು ಶಿವಣ್ಣ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ನಂದೀಶ್, ಕೆ.ಪಿ.ಮಹೇಶ್, ಜಯಸಿಂಹರಾವ್, ಬನಶಂಕರಿ ಬಾಬು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News