ಕುಂದಗೋಳ, ಚಿಂಚೋಳಿ ಕ್ಷೇತ್ರ ಉಪ ಚುನಾವಣೆ: ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮ

Update: 2019-04-25 12:58 GMT

ಬೆಂಗಳೂರು, ಎ. 25: ಲೋಕಸಭೆ ಚುನಾವಣೆ ಮುಕ್ತಾಯದ ಬೆನ್ನಲ್ಲೆ ಮೈತ್ರಿಕೂಟ ಹಾಗೂ ವಿಪಕ್ಷ ಬಿಜೆಪಿಗೆ ಧಾರವಾಡ ಜಿಲ್ಲೆ ಕುಂದಗೋಳ ಮತ್ತು ಕಲಬುರಗಿ ಜಿಲ್ಲೆ ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆ (ಮೇ 19) ಎದುರಾಗಿದ್ದು, ಅಭ್ಯರ್ಥಿಗಳ ಆಯ್ಕೆ ಬಹುತೇಕ ಅಂತಿಮವಾಗಿದ್ದು ಅಧಿಕೃತ ಘೋಷಣೆಯಷ್ಟೆ ಬಾಕಿ ಉಳಿದಿದೆ.

ಈಗಾಗಲೇ ಉಪ ಚುನಾವಣೆಗೆ ಅಧಿಸೂಚನೆ ಹೊರಬಿದ್ದು ನಾಲ್ಕೈದು ದಿನಗಳೆ ಕಳೆದಿದ್ದು ನಾಮಪತ್ರ ಸಲ್ಲಿಸಲು(ಎ.29) ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದೆ. ನಾಳೆ (ಎ.26) ಸಂಜೆಯೊಳಗೆ ಹೈಕಮಾಂಡ್ ಒಪ್ಪಿಗೆ ಪಡೆದು ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ನಿರೀಕ್ಷೆ ಇದೆ.

ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾಗಿರುವ ಕುಂದಗೋಳದಲ್ಲಿ ಅವರ ಪತ್ನಿ ಕುಸುಮಾ ಶಿವಳ್ಳಿಗೆ ಟಿಕೆಟ್ ಅಂತಿಮಗೊಳಿಸಲಾಗಿದೆ. ಬಿಜೆಪಿಯಿಂದ ಬಿಎಸ್‌ವೈ ಆಪ್ತ ಹಾಗೂ ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಸೋಲುಂಡಿದ್ದ ಸಿ.ಎಸ್.ಚಿಕ್ಕನಗೌಡರ್ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ.

ಅತ್ತ ಚಿಂಚೋಳಿ ಕ್ಷೇತ್ರದಲ್ಲಿ ಡಾ.ಉಮೇಶ್ ಜಾಧವ್ ಅವರ ಸಹೋದರ ರಾಮಚಂದ್ರ ಜಾಧವ್ ಹೆಸರು ಅಂತಿಮಗೊಳಿಸಿದ್ದರೆ, ಕಾಂಗ್ರೆಸ್‌ನಿಂದ ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಕೆ.ಬಿ.ಶಾಣಪ್ಪ ಅಥವಾ ಸುಭಾಶ್ ರಾಠೋಡ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ.

ಕುಂದಗೋಳ ಮತ್ತು ಚಿಂಚೋಳಿ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಮೈತ್ರಿ ಬೆಂಬಲದ ಜೊತೆಗೆ ಶಿವಳ್ಳಿ ನಿಧನದ ಅನುಕಂಪದ ಅಲೆ ಹಾಗೂ ಜಾಧವ್ ಪಕ್ಷ ದ್ರೋಹದ ಆರೋಪಗಳನ್ನು ಮುಂದಿಟ್ಟುಕೊಂಡು ಉಪ ಚುನಾವಣಾ ಸಮರಕ್ಕೆ ಮುಂದಾಗಿದೆ. ಈ ನಡುವೆ ಅತೃಪ್ತಿಯ ಬೇಗುದಿಯಲ್ಲಿ ಬೇಯುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಸೋಲಿಸಲು ವಿಪಕ್ಷ ಬಿಜೆಪಿ ರಣತಂತ್ರ ರೂಪಿಸಿದೆ. ಶತಾಯ- ಗತಾಯ ಉಪ ಚುನಾವಣೆಯನ್ನು ಗೆಲ್ಲುವ ಮೂಲಕ ವಿಧಾನಸಭೆ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಸಜ್ಜಾಗಿದೆ.

ಗೆಲ್ಲಲು ತಂತ್ರ: ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದೇವೆ. ಅಭ್ಯರ್ಥಿ ಆಯ್ಕೆ ಸಂಬಂಧ ಕ್ಷೇತ್ರಗಳ ಮುಖಂಡರ ಜತೆ ಚರ್ಚಿಸಿದ್ದು, ಹೈಕಮಾಂಡ್ ಒಪ್ಪಿಗೆ ಪಡೆದು ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಎರಡೂ ಕ್ಷೇತ್ರಗಳಿಂದಲೂ ಕಳೆದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳೇ ಅಯ್ಕೆಯಾಗಿದ್ದರು. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಅಗತ್ಯ ರಣತಂತ್ರ ರೂಪಿಸಲಾಗುವುದು ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.

ಚಿಂಚೋಳಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಡಾ.ಉಮೇಶ್ ಜಾಧವ್ ಪಕ್ಷ ಬಿಟ್ಟು ಹೋಗಿದ್ದು ಏಕೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಉಪ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನಮಗೆ ಬೆಂಬಲ ನೀಡಲಿದ್ದು ಗೆಲುವು ನಮ್ಮದೆ. ಈ ಬಗ್ಗೆ ಯಾವುದೇ ಸಂಶಯಬೇಡ

-ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

‘ಕುಂದಗೋಳ ಮತ್ತು ಚಿಂಚೋಳಿ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಕೇಂದ್ರ ಚುನಾವಣಾ ಸಮಿತಿಗೆ ಪಟ್ಟಿ ರವಾನಿಸಲಾಗಿದೆ. ನಾಳೆ ಸಂಜೆಯೊಳಗೆ ಅಭ್ಯರ್ಥಿಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಎರಡೂ ಕ್ಷೇತ್ರಗಳನ್ನು ಗೆಲ್ಲಲು ಎಲ್ಲ ಪ್ರಯತ್ನ ನಡೆಸಲಾಗುವುದು’

-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಸಂಭವನೀಯ ಅಭ್ಯರ್ಥಿಗಳು

ಕುಂದಗೋಳ-ಕುಸುಮಾ ಶಿವಳ್ಳಿ(ಕಾಂಗ್ರೆಸ್), ಸಿ.ಎಸ್. ಚಿಕ್ಕನಗೌಡರ್ (ಬಿಜೆಪಿ)

ಚಿಂಚೋಳಿ-ಕೆ.ಬಿ.ಶಾಣಪ್ಪ ಅಥವಾ ಸುಭಾಶ್ ರಾಠೋಡ್ (ಕಾಂಗ್ರೆಸ್), ರಾಮಚಂದ್ರ ಜಾಧವ್ (ಬಿಜೆಪಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News