ಅಂಗನವಾಡಿ ಮಕ್ಕಳ ಆಹಾರಕ್ಕೆ ಶಿಕ್ಷಕಿಯಿಂದಲೇ ಕನ್ನ: ಆರೋಪ

Update: 2019-04-25 13:14 GMT

ಚಿಕ್ಕಮಗಳೂರು, ಎ.25: ಅಂಗನವಾಡಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರಕಾರ ಪೂರೈಸುವ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಅಂಗನವಾಡಿ ಶಿಕ್ಷಕಿಯೇ ತನ್ನ ಮನೆಗೆ ಕದ್ದೊಯ್ಯುತ್ತಿದ್ದ ಘಟನೆ ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಗ್ರಾಮಸ್ಥರ ದೂರಿನ ಮೇರೆಗೆ ಶಿಕ್ಷಕಿಯನ್ನು ವಜಾ ಮಾಡಲಾಗಿದೆ.

ತಾಲೂಕಿನ ಅಂಬಳೆ ಗ್ರಾಮದ ನಿವಾಸಿಯಾಗಿರುವ ಹನುಮಮ್ಮ ಎಂಬವರೇ ಅಂಗನವಾಡಿ ಪೌಷ್ಠಿಕ ಆಹಾರಗಳನ್ನು ಮನೆಗೆ ಕೊಂಡೊಯ್ದು ಗ್ರಾಮಸ್ಥರ ಕೈಗೆ ಸಿಲುಕಿಕೊಂಡ ಶಿಕ್ಷಕಿಯಾಗಿದ್ದಾರೆ. ಈ ಅಂಗನವಾಡಿ ಶಿಕ್ಷಕಿ ಇತ್ತೀಚೆಗೆ ಅಂಬಳೆ ಗ್ರಾಮದಲ್ಲಿರುವ ಅಂಗನವಾಡಿಯಿಂದ ಮಕ್ಕಳಿಗೆ ಪೂರೈಕೆಯಾಗಿದ್ದ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಪ್ಯಾಕೆಟ್‍ಗಳನ್ನು ಬಕೆಟ್‍ವೊಂದರಲ್ಲಿ ತುಂಬಿಕೊಂಡು ತನ್ನ ಮನೆಗೆ ಸಾಗಿಸುತ್ತಿದ್ದರೆಂದು ತಿಳಿದು ಬಂದಿದೆ.

ಮಕ್ಕಳ ಆಹಾರ ಪದಾರ್ಥಗಳನ್ನು ಅಂಗನವಾಡಿ ಶಿಕ್ಷಕಿ ತನ್ನ ಮನೆಗೆ ಸಾಗಿಸುತ್ತಿದ್ದಾರೆಂದು ಈ ಹಿಂದಿನಿಂದಲೂ ಶಿಕ್ಷಕಿ ಹನುಮಮ್ಮ ಮೇಲೆ ಆರೋಪಗಳು ಕೇಳಿ ಬಂದಿದ್ದವು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಗ್ರಾಮಸ್ಥರು ಅಂದು ಶಿಕ್ಷಕಿ ಕೊಂಡೊಯ್ಯುತ್ತಿದ್ದ ಬಕೆಟ್ ಅನ್ನು ಪರಿಶೀಲಿಸಿದಾಗ ಬಕೆಟ್ ತುಂಬಾ ಸರಕಾರ ಪೂರೈಕೆ ಮಾಡಿದ್ದ ಅಂಗನವಾಡಿ ಮಕ್ಕಳ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳಿದ್ದ ಪ್ಯಾಕೆಟ್‍ಗಳಿದ್ದವೆಂದು ತಿಳಿದು ಬಂದಿದೆ.

ಕೂಡಲೇ ಗ್ರಾಮಸ್ಥರು ಒಟ್ಟುಗೂಡಿ ಅಂಗನವಾಡಿ ಶಿಕ್ಷಕಿಯನ್ನು ತರಾಟೆಗೆ ಪಡೆದು ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದು ಅಂಗನವಾಡಿಯಲ್ಲಿರಿಸಿದ್ದಾರೆ. ಈ ವೇಳೆ ತನ್ನಿಂದ ತಪ್ಪಾಗಿದೆ ಎಂದು ಶಿಕ್ಷಕಿ ಗ್ರಾಮಸ್ಥರನ್ನು ಗೋಗರೆದಿದ್ದಾರಾದರೂ ಗ್ರಾಮದ ಮುಖಂಡರು ಶಿಕ್ಷಕಿಯ ಕರ್ತವ್ಯ ಲೋಪದ ವಿರುದ್ಧ ಸಿಡಿಪಿಒ ಇಲಾಖಾಧಿಕಾರಿಗಳ ಗಮನಕ್ಕೆ ತಂದು ದೂರು ನೀಡಿದ್ದಾರೆ.

ಸ್ಥಳಕ್ಕೆ ಬಂದ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆದು ದೂರು ದಾಖಲಿಸಿದ್ದಾರೆಂದು ತಿಳಿದು ಬಂದಿದೆ. ಅಂಗನವಾಡಿ ಶಿಕ್ಷಕಿ ಮಕ್ಕಳ ಆಹಾರಕ್ಕೆ ಕನ್ನ ಹಾಕಿರುವುದು ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನು ಕೆಲಸದಿಂದ ವಜಾಗೊಳಿಸಿ ಸಿಡಿಪಿಒ ಗುರುವಾರ ಆದೇಶ ಹೊರಡಿಸಿದ್ದಾರೆಂದು ತಿಳಿದು ಬಂದಿದೆ.

ಅಂಬಳೆ ಗ್ರಾಮದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಹನುಮಮ್ಮ ಈ ಹಿಂದೆಯೂ ಮಕ್ಕಳ ಆಹಾರ ಪದಾರ್ಥಗಳನ್ನು ಕದ್ದು ತನ್ನ ಮನೆಗೆ ಸಾಗಣೆ ಮಾಡುತ್ತಿದ್ದರಾದರೂ ಗ್ರಾಮಸ್ಥರ ಕೈಗೆ ಸಿಕ್ಕಿರಲಿಲ್ಲ. ಮಕ್ಕಳಿಗೆ ಸರಿಯಾಗಿ ಆಹಾರ ನೀಡದೇ, ಸರಿಯಾಗಿ ಕರ್ತವ್ಯವನ್ನೂ ನಿರ್ವಹಿಸುತ್ತಿರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಅಲ್ಲದೇ ಈ ಅಂಗನವಾಡಿ ಶಿಕ್ಷಕಿಯ ಪತಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈಕೆಯ ಮಕ್ಕಳೂ ಸರಕಾರಿ ವೃತ್ತಿಯಲ್ಲಿದ್ದಾರೆ. ಈಕೆಯ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಆದರೂ ಮಕ್ಕಳ ಅನ್ನಕ್ಕೆ ಕನ್ನ ಹಾಕುವ ಇಂತಹ ಶಿಕ್ಷಕಿಗೆ ಕೆಲಸ ನೀಡಿರುವುದೇ ತಪ್ಪು. ನಿರುದ್ಯೋಗಿ ಬಡವರ್ಗದವರಿಗೆ ಅಂಗನವಾಡಿ ಶಿಕ್ಷಕಿಯ ಕೆಲಸ ನೀಡಬೇಕಿತ್ತು. ಆದರೆ ಇಲಾಖಾಧಿಕಾರಿಗಳು ಯಾರದ್ದೋ ಪ್ರಭಾವಕ್ಕೊಳಗಾಗಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಮಹಿಳೆಗೆ ಉದ್ಯೋಗಕ್ಕೆ ನೇಮಿಸಿಕೊಂಡಿದ್ದಾರೆ. ಇಂತಹ ಶಿಕ್ಷಕಿಯನ್ನು ನಂಬಿ ಅಂಗನವಾಡಿಗೆ ನಮ್ಮ ಮಕ್ಕಳನ್ನು ಕಳಿಸುವುದಾದರೂ ಹೇಗೆಂದು ಗ್ರಾಮದ ನಿವಾಸಿ ಸರೋಜಾ ಪ್ರಶ್ನಿಸಿದ್ದಾರೆ.

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಅಂಬಳೆ ಗ್ರಾಮದಲ್ಲಿರುವ ಅಂಗನವಾಡಿಯಲ್ಲಿ 50 ಮಕ್ಕಳಿದ್ದಾರೆ. ಈ ಮಕ್ಕಳಿಗೆ ಇಲಾಖೆ ವತಿಯಿಂದ ಪೂರೈಸಲಾದ ಸುಮಾರು 15 ಪ್ಯಾಕೆಟ್‍ಗಳಷ್ಟು ಪೌಷ್ಟಿಕ ಆಹಾರ ಪದಾರ್ಥವನ್ನು ಅಂಗನವಾಡಿ ಶಿಕ್ಷಕಿ ಹನುಮಮ್ಮ ತನ್ನ ಮನೆಗೆ ಕೊಂಡೊಯ್ಯತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಪರಿಶೀಲನೆ ನಡೆಸಿದ್ದೇವೆ. ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನ ಕೆಲಸದಿಂದ ಅಮಾನತು ಮಾಡಲಾಗಿದೆ.
- ಚಂದ್ರಶೇಖರ್, ಸಿಡಿಪಿಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News