ಮಡಿಕೇರಿಯಲ್ಲಿ ಕಾಣಿಸಿಕೊಂಡ ಅಪರಿಚಿತರು ನಕ್ಸಲರೇ?: ಎಸ್‍ಪಿ ಡಾ.ಸುಮನ್ ಹೇಳಿದ್ದು ಹೀಗೆ..

Update: 2019-04-25 13:24 GMT

ಮಡಿಕೇರಿ,ಎ.25: ಯವಕಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆಯೇ, ಈ ಕುರಿತು ಸ್ಪಷ್ಟೀಕರಣ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್, ಗ್ರಾಮಕ್ಕೆ ಭೇಟಿ ನೀಡಿದ ಇಬ್ಬರು ಅಪರಿಚಿತರಿಗೂ, ನಕ್ಸಲರಿಗೂ ಹೋಲಿಕೆಯಾಗುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಎಪ್ರಿಲ್ 25 ರಂದು ಬೆಳಗ್ಗೆ 10.30 ಗಂಟೆ ಸುಮಾರಿಗೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಕುಡಿಯ ಜನಾಂಗದ ಮಹಿಳೆಯೊಬ್ಬರ ಮನೆಗೆ ಸುಮಾರು 40 ವರ್ಷದ ಓರ್ವ ಪುರುಷ ಹಾಗೂ ಓರ್ವ ಮಹಿಳೆ ಆಗಮಿಸಿದ್ದರು. ನಂತರ ಮನೆಯಲ್ಲಿದ್ದ ಮಹಿಳೆಯಿಂದ ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದು, ಇವರನ್ನು ನಕ್ಸಲರೆಂದು ತಿಳಿದು ಗ್ರಾಮಸ್ಥರು ಮಾಹಿತಿ ನೀಡಿದ ಹಿನ್ನೆಲೆ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ನಕ್ಸಲರ ಸುಳಿವು ಕಂಡು ಬಂದಿಲ್ಲ. 

ಮನೆಯಲ್ಲಿದ್ದ ಮಹಿಳೆಗೆ ನಕ್ಸಲರ ಭಾವಚಿತ್ರಗಳನ್ನು ತೋರಿಸಿ ಪ್ರಶ್ನಿಸಿದಾಗ, ಇವರು ಯಾರೂ ಬಂದಿಲ್ಲವೆಂದು ತಿಳಿಸಿರುತ್ತಾರೆ. ಬಂದವರು ನಕ್ಸಲರು ಧರಿಸುವ ಸಮವಸ್ತ್ರದಲ್ಲಿ ಇಲ್ಲದೆ ಪ್ಯಾಂಟ್, ಷರ್ಟ್ ಹಾಗೂ ಚೂಡಿದಾರ್ ಧರಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, ಅವರ ಬಳಿ ಯಾವುದೇ ಆಯುಧಗಳು ಇದ್ದದ್ದು ಕಂಡು ಬಂದಿಲ್ಲ. ಇಬ್ಬರು ಅಪರಿಚಿತರು ಮರಳಿದ ಹಾದಿಯಲ್ಲಿ ಸುಮಾರು 80 ಮೀಟರ್ ದೂರ ಪೊಲೀಸರು ಸಾಗಿದಾಗ ಮಹಿಳೆಯಿಂದ ಕಸಿದುಕೊಂಡ ಮೊಬೈಲ್ ಫೋನ್ ದೊರಕಿರುತ್ತದೆ. ಅದೇ ಮಾರ್ಗದಲ್ಲಿ ಸುಮಾರು 400 ಮೀ. ನಷ್ಟು ದೂರ ಸಾಗಿದಾಗ ಆ ದಾರಿಯು ಅಂತ್ಯಗೊಂಡಿದ್ದು, ಮುಂದೆ ಯಾವುದೇ ದಾರಿ ಇಲ್ಲ. ಮನೆಯಿಂದ 15 ಕೆ.ಜಿ. ಅಕ್ಕಿಯನ್ನು ತೆಗೆದುಕೊಂಡು ಹೋಗಿರುವುದಾಗಿ ಮತ್ತೊಬ್ಬ ಗ್ರಾಮಸ್ಥರು ತಿಳಿಸಿದ್ದು, ಆ ಮನೆಯನ್ನು ಪರಿಶೀಲಿಸಿದಾಗ ಅಕ್ಕಿಯನ್ನು ತೆಗೆದುಕೊಂಡು ಹೋದ ಯಾವುದೇ ಕುರುಹುಗಳು ಕಂಡು ಬಂದಿರುವುದಿಲ್ಲ. ಈ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ ಅಕ್ಕಿಯನ್ನು ತೆಗೆದುಕೊಂಡು ಹೋಗಿರುವುದನ್ನು ಯಾರೂ ನೋಡಿಲ್ಲವೆಂದು ತಿಳಿಸಿದ್ದಾರೆ. 

ಆದರೂ, ಸ್ಥಳದಲ್ಲಿ ಸ್ಥಳೀಯ ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಮಸ್ಥರು ನೀಡಿದ ದೂರನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ ಎಂದು ಎಸ್‍ಪಿ ಸುಮನ್ ಪನ್ನೇಕರ್ ಸ್ಪಷ್ಟಪಡಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News