ಸರಕಾರ ಬೀಳಿಸುವಷ್ಟು ಸಂಖ್ಯಾಬಲ ರಮೇಶ್ ಬಳಿ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ

Update: 2019-04-25 13:29 GMT
ರಮೇಶ್ ಜಾರಕಿಹೊಳಿ-ಸತೀಶ್ ಜಾರಕಿಹೊಳಿ

ಬೆಳಗಾವಿ, ಎ. 25: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಿಸುವಷ್ಟು ಸಂಖ್ಯಾಬಲ ರಮೇಶ್‌ ಜಾರಕಿಹೊಳಿ ಬಳಿಯಲ್ಲಿ ಇಲ್ಲ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೈತ್ರಿ ಸರಕಾರ ಬೀಳಿಸಲು ಈಗಾಗಲೇ ಮೂರ್ನಾಲ್ಕು ಬಾರಿ ಪ್ರಯತ್ನ ನಡೆಸಿದ್ದು, ಅದು ಸಾಧ್ಯವಾಗಿಲ್ಲ. ಮೈತ್ರಿ ಸರಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳ ಮುಖಂಡರು ಸಮರ್ಥರಿದ್ದಾರೆ ಎಂದರು.

ರಮೇಶ್‌ಗೆ ಯಾವುದೇ ಬದ್ಧತೆ ಇಲ್ಲ. ಬೆಳಗ್ಗೆ ಒಂದು, ಸಂಜೆ ಮತ್ತೊಂದು ಹೇಳುತ್ತಾನೆ. ರಾಜೀನಾಮೆ ಕೊಡುತ್ತೇನೆ ಎಂದು ಬೆಳಗಾವಿಯಲ್ಲಿ ಹೇಳಿದ್ದ. ಆದರೆ ಬೆಂಗಳೂರಿಗೆ ಹೋಗಿ ಸದ್ಯಕ್ಕೆ ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದ್ದಾನೆ. ಅವನು ಕೆಲಸವಿಲ್ಲದೆ ಖಾಲಿ ಇದ್ದು, ಹೀಗಾಗಿ ಏನೇನೋ ಮಾತನಾಡುತ್ತಿದ್ದಾನೆಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಮೈತ್ರಿ ಸರಕಾರದಲ್ಲಿ ಶಾಸಕ ರಮೇಶ್ ಅವರಿಗಷ್ಟೇ ತೊಂದರೆ ಆಗಿರಬಹುದು. ಉಳಿದ ಶಾಸಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂದ ಸತೀಶ್ ಜಾರಕಿಹೊಳಿ, ಅಥಣಿಯ ಶಾಸಕ ಮಹೇಶ ಕುಮಟಳ್ಳಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಕೆಲಸ ಮಾಡಿದ್ದಾರೆ ಎಂದರು.

ಮಹೇಶ್ ಅವರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟಿದ್ದು. ಮುಂದಿನ ಬೆಳವಣಿಗೆಗಳನ್ನು ಹೈಕಮಾಂಡ್, ಶಾಸಕಾಂಗ ಪಕ್ಷದ ಸಿದ್ದರಾಮಯ್ಯ ನೋಡಿಕೊಳ್ಳುತ್ತಾರೆ ಎಂದ ಅವರು, ಸಮಸ್ಯೆ ಏನಾಗಿದೆ ಎನ್ನುವುದನ್ನು ರಮೇಶನನ್ನೇ ಕೇಳಬೇಕು. ಜನರಿಗೂ ಆ ಬಗ್ಗೆ ಕುತೂಹಲ ಇದೆ ಎಂದರು.

ರಮೇಶ್ ಬಿಜೆಪಿ ಸೇರಲು 10 ಕಾರಣಗಳಿವೆ. ಅಳಿಯ ಅಂಬಿರಾವ್ ಪಾಟೀಲಗೆ ಮಹಾರಾಷ್ಟ್ರದಲ್ಲಿ ಬಿಜೆಪಿ ಟಿಕೆಟ್ ಕೊಡಿಸಬೇಕು ಎನ್ನುವುದು ಕಾರಣಗಳಲ್ಲಿ ಒಂದು. ಉಳಿದ 9 ಕಾರಣಗಳನ್ನು ನೀವು ಅವರನ್ನೇ ಕೇಳಿ ಎಂದು ಸತೀಶ್ ಜಾರಕಿಹೊಳಿ ನುಡಿದರು.

ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಪಕ್ಷದ ವೀಕ್ಷಕರು ರಮೇಶ್ ವಿರುದ್ಧ ವರದಿ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಉದಾಹರಣೆ ಇವೆ. ಲೋಕಸಭಾ ಚುನಾವಣೆ ಬಳಿಕ ಪಕ್ಷ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News