ವಿದ್ಯಾರ್ಥಿನಿ ಮಧು ನಿಗೂಢ ಸಾವು ಪ್ರಕರಣ: ಕರ್ತವ್ಯಲೋಪ ಎಸಗಿದ ಪಿಎಸ್‌ಐ, ಪೇದೆ ಅಮಾನತು

Update: 2019-04-25 13:37 GMT

ರಾಯಚೂರು, ಎ.25: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್‌ರ ನಿಗೂಢ ಸಾವಿನ ಪ್ರಕರಣದ ಕುರಿತು ಜನಾಕ್ರೋಶ ಅಧಿಕವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಒಬ್ಬ ಪಿಎಸ್‌ಐ ಹಾಗೂ ಪೇದೆಯನ್ನು ಅಮಾನತುಗೊಳಿಸಿ ಆದೇಶಿಸಿದೆ.

ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಠಾಣೆಯ ಪಿಎಸ್‌ಐ ಮರಿಯಮ್ಮ ಹಾಗೂ ಪೇದೆ ಆಂಜಿನೇಯ ಯಾದವ ಎಂಬವರನ್ನು ಅಮಾನತು ಮಾಡಲಾಗಿದೆ ಎಂದು ಇಲಾಖೆ ಹೇಳಿದೆ.

ಮಧು ಪತ್ತಾರ್ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿ, ಅವರ ತಂದೆ ನಾಗರಾಜ ಮತ್ತು ತಾಯಿ ರೇಣುಕಾ ಪತ್ತಾರ್ ದೂರು ನೀಡಲು ಠಾಣೆಗೆ ಬಂದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಮರಿಯಮ್ಮ ಪ್ರಕರಣ ದಾಖಲಿಸಿಕೊಳ್ಳದೆ, ನಿರ್ಲಕ್ಷ್ಯ ತೋರಿಸಿರುವುದಕ್ಕೆ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಮಧುಪತ್ತಾರ್‌ರ ನಿಗೂಢ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಬಂಧಿಸಿರುವ ಆರೋಪಿ ಸುದರ್ಶನ್ ಬಜಾರಪ್ಪ ಇಲ್ಲಿನ ಪೇದೆ ಆಂಜಿನೇಯ ಯಾದವ ಸಂಬಂಧಿಯಾಗಿದ್ದಾರೆ. ಅಲ್ಲದೆ, ಅವರಿಗೆ ಈ ಪ್ರಕರಣದ ಸಂಬಂಧ ಮಾಹಿತಿಯಿದ್ದರೂ, ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್‌ ಬಾಬು ಆದೇಶ ಹೊರಡಿಸಿದ್ದಾರೆ.

ಮಧು ಪತ್ತಾರ್‌ರ ತಾಯಿ ಮತ್ತು ತಂದೆ ಪೊಲೀಸರ ವೈಫಲ್ಯದ ಬಗ್ಗೆ ಹಲವು ಬಾರಿ ದೂರು ನೀಡಿದ್ದರು. ಆದರೆ, ಈ ಕುರಿತು ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಮಧು ಪತ್ತಾರ್ ಪ್ರಕರಣ ಸಿಐಡಿಗೆ ವಹಿಸಿದ ನಂತರದ ತನಿಖೆಯಲ್ಲಿ ಈ ಕುರಿತು ತಿಳಿದುಬಂದಿದೆ.

ಯುವತಿ ಕಾಣೆಗೆ ಸಂಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳದಿರುವುದು ಮತ್ತು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯಿದ್ದರೂ, ಪೇದೆ ಆಂಜಿನೇಯ ಯಾದವ ಈ ಬಗ್ಗೆ ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆಂಬ ಆರೋಪದ ಮೇರೆಗೆ ಪೊಲೀಸ್ ಇಲಾಖೆ ಇಬ್ಬರ ಅಮಾನತು ಮಾಡಿದೆ. ಅಲ್ಲದೆ, ಇದು ಸಾಬೀತುಗೊಂಡಿದ್ದು, ಅವರ ಅಮಾನತು ಮಾನ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News