ಜಿಲ್ಲಾದ್ಯಂತ ಸುಗಮ ಸಂಚಾರಕ್ಕೆ ವೈಜ್ಞಾನಿಕ ಸರ್ವೇ: ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ

Update: 2019-04-25 14:05 GMT

ಚಿಕ್ಕಮಗಳೂರು, ಎ.25: ನಗರದ ಪ್ರಮುಖ ರಸ್ತೆಗಳೂ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸುಗಮ ಸಂಚಾರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲು ವೈಜ್ಞಾನಿಕ ಸರ್ವೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಎ.30ರೊಳಗೆ ವರದಿ ಸಿದ್ಧವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಅಂತಿಮ ಹಂತದ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದ್ದು, ಈ ನಡುವೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಸದ್ಯಕ್ಕೆ ಕೆಳಹಂತದ ಸಿಬ್ಬಂದಿ ವರ್ಗಾವಣೆ ಇಲ್ಲ. ಚುನಾವಣೆಯ ಒತ್ತಡದ ನಂತರ ಈಗ ಇತರ ಹೊಣೆಗಾರಿಕೆ ಬಗ್ಗೆ ಗಮನಹರಿಸಲಾಗಿದೆ ಎಂದ ಅವರು, ಕಳೆದ ಒಂದು ತಿಂಗಳ ಹಿಂದೆ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ತೀರ್ಮಾನದಂತೆ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ಒಂಬತ್ತು ತಾಲೂಕು ಕೇಂದ್ರಗಳಲ್ಲಿ ಸುಗಮ ಸಂಚಾರಕ್ಕೆ ಅನುವಾಗುವಂತೆ ಕ್ರಮ ಕೈಗೊಳ್ಳಲು ಸರ್ವೆ ನಡೆಸಲಾಗುತ್ತಿದೆ ಎಂದರು.

ಸುಮಗ ಸಂಚಾರಕ್ಕೆ ಅಡಚಣೆ ಒಡ್ಡುತ್ತಿರುವ ಒಟ್ಟು ನಲ್ವತ್ತೆಂಟು ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ರಸ್ತೆ ಅಗಲೀಕರಣ, ರಸ್ತೆಯನ್ನು ನೇರವಾಗಿಸುವುದು, ವೈಜ್ಞಾನಿಕವಾದ  ಮತ್ತು ಸುಪ್ರೀಂಕೋರ್ಟ್ ಮಾನ್ಯತೆ ನೀಡಿರುವ ಹಂಪ್ಸ್ ಗಳ ನಿರ್ಮಾಣ, ಅಗತ್ಯ ಇರುವೆಡೆ ರಸ್ತೆಯನ್ನು ತಗ್ಗು ಅಥವ ಎತ್ತರಗೊಳಿಸುವುದು, ವಿಭಜಕಗಳನ್ನು ಅಳವಡಿಸುವುದು ಹೀಗೆ ಎಲ್ಲಾ ಅಂಶಗಳನ್ನು ಪೊಲೀಸ್, ಸಾರಿಗೆ ಇಲಾಖೆ ಹಾಗೂ ಲೋಕೋಪಯೋಗಿ ಇಂಜಿನಿಯರ್ ಗಳನ್ನು ಹೊಂದಿರುವ ತಂಡ ಪರಿಶೀಲಿಸಿ ವರದಿ ಸಲ್ಲಿಸಲಿದೆ ಎಂದು ಅವರು ವಿವರಿಸಿದರು.

ಈ ವರದಿಯನ್ನು ಮುಂದಿನ ರಸ್ತೆ ಸುರಕ್ಷತಾ ಸಮಿತಿ ಸಭೆಯ ಮುಂದಿರಿಸಲಾಗುವುದು ಎಂದ ಅವರು, ನಗರದಲ್ಲಿನ ಇಂದಿರಾಗಾಂಧಿ ರಸ್ತೆ, ಮಹಾತ್ಮಗಾಂಧಿ ರಸ್ತೆಗಳಲ್ಲಿ ಏಕ ಮುಖ ಸಂಚಾರ ಮತ್ತು ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ಪರಿಹಾರ ಕುರಿತು ಕೂಡ ಅಧಿಕಾರಿಗಳ ತಂಡ ಪರಿಶೀಲಿಸಲಿದೆ. ಎಐಟಿ ವೃತ್ತ ಮತ್ತು ಇತರೆಡೆ ಸಂಚಾರ ನಿಯಂತ್ರಣ ಸಿಗ್ನಲ್ ಅಳವಡಿಕೆಯ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ನಗರದ ಶೃಂಗಾರ್ ವೃತ್ತದ ಬಳಿ ಇರುವ ಬಸ್ ಸ್ಟಾಪ್‍ನಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಅದರ ಸ್ಥಳ ಬದಲಾವಣೆಗೊಳಿಸಲಾಗುವುದು. ಬಸ್‍ಸ್ಟಾಪ್ ಇಲ್ಲದಿದ್ದರೆ ಬಸ್‍ಗಳ ನಿಲುಗಡೆ ಆಗುವುದಿಲ್ಲ. ಆಟೊಗಳ ಒತ್ತಡವೂ ಇರುವುದಿಲ್ಲ. ಹೀಗಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ನಗರದ ಪ್ರಮುಖ ರಸ್ತೆಗಳಲ್ಲಿನ ಲಾಡ್ಜ್ ಮತ್ತು ಹೋಟೆಲ್‍ಗಳು ವಾಹನ ನಿಲುಗಡೆಗೆ ತಮ್ಮದೇ ಆದ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ಅಂತಹ ವ್ಯವಸ್ಥೆ ಇಲ್ಲದಿರುವುದರಿಂದ ಸಂಚಾರ ಸಮಸ್ಯೆ ಎದುರಾಗುತ್ತಿದ್ದು, ಈ ಬಗ್ಗೆ ನಗರಸಭೆ ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಇಂದಿರಾಗಾಂಧಿ ರಸ್ತೆಯ ಎನ್‍ಎಂಸಿ ವೃತ್ತದ ಬಳಿ ವಾಹನ ಸಂಚಾರದ ಒತ್ತಡವಿದೆ. ಮೂರು ರಸ್ತೆಗ ಳಿಂದ ಬರುವ ವಾಹನಗಳ ಸಂಚಾರವನ್ನು ಸುಗಮಗೊಳಿಸಲು ಈಗಿರುವ ಸಿಗ್ನಲ್‍ನ ಅವಧಿಯನ್ನು ಪರಿಷ್ಕರಣೆಗೊಳಿಸಬೇಕಾಗಿದೆ. ಕೆಂಪು ದೀಪ ಬಿದ್ದಾಗ ನಿಲುಗಡೆಗೊಳ್ಳುವ ವಾಹನಗಳು ಹಸಿರು ದೀಪ ಬಂದಾಗ ಸರಾಗವಾಗಿ ಸಾಗಲು ಅಡಚಣೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ವೃತ್ತದ ಮೂರು ರಸ್ತೆಗಳಲ್ಲಿ 100 ಮೀಟರ್ ವ್ಯಾಪ್ತಿಯಲ್ಲಿ ನಾಲ್ಕು ಚಕ್ರ ವಾಹನಗಳ ನಿಲುಗಡೆ ನಿಷೇಧಿಸಲು ಚಿಂತನೆ ನಡೆಸಲಾಗಿದೆ.
- ಹರೀಶ್ ಪಾಂಡೆ, ಎಸ್ಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News