"ಮಣಿಪಾಲ್ ಆಸ್ಪತ್ರೆಗೆ ದಾಖಲಾದ ನಾಲ್ವರಲ್ಲಿ ಮಾತ್ರ ಮಂಗನ ಕಾಯಿಲೆ ದೃಢ"

Update: 2019-04-25 15:09 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಎ. 25: ಪ್ರಸ್ತುತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 28 ಜನರಲ್ಲಿ, ನಾಲ್ವರಲ್ಲಿ ಮಾತ್ರ ಮಂಗನ ಕಾಯಿಲೆ (ಕೆಎಫ್‍ಡಿ) ದೃಢಪಟ್ಟಿದೆ. ಉಳಿದವರಲ್ಲಿ ಸೋಂಕು ಕಂಡು ಬಂದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಲ್ಲಿಯವರೆಗೂ ಮಣಿಪಾಲ್ ಆಸ್ಪತ್ರೆಯಲ್ಲಿ 367 ಜನರು ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದರಲ್ಲಿ 199ರಲ್ಲಿ ಕೆಎಫ್‍ಡಿ ಕಂಡುಬಂದಿದ್ದು, ಉಳಿದವರಲ್ಲಿ ನೆಗೆಟಿವ್ ಇದೆ ಎಂದು ತಿಳಿಸಿದರು.

ಮಂಗನ ಕಾಯಿಲೆ ನಿಯಂತ್ರಣಕ್ಕೆ ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಡಿಎಂಪಿ ತೈಲ, ವ್ಯಾಕ್ಸಿನ್ ಹಾಗೂ ಅಗತ್ಯ ಔಷಧ ದಾಸ್ತಾನಿದೆ. ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವ್ಯಾಪಕ ಜನಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹಾಗೆಯೇ ಸಾಗರ ತಾಲೂಕಿನ ಅರಲಗೋಡು ಹಾಗೂ ಕಾರ್ಗಲ್‍ನಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆ ಲಭ್ಯವಿರುವ ವ್ಯವಸ್ಥೆ ಮಾಡಲಾಗಿದೆ. ಅರಲಗೋಡುವಿನಲ್ಲಿ ಎರಡು ಮತ್ತು ಕಾರ್ಗಲ್‍ನಲ್ಲಿ ಒಂದು ಆ್ಯಂಬುಲೆನ್ಸ್ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಕೆಎಫ್‍ಡಿ ಕಾಣಿಸಿಕೊಂಡಿರುವ ಕಾರ್ಗಲ್ ಸುತ್ತಲಿನ 6 ಹಾಗೂ ಅರಲಗೋಡು ಸುತ್ತಮುತ್ತಲಿನ 16 ಗ್ರಾಮಗಳಲ್ಲಿ ನಿರಂತರ ತಪಾಸಣಾ ಕಾರ್ಯ ನಡೆಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರ ತಂಡ ಮನೆ ಮನೆಗೆ ಭೇಟಿಯಿತ್ತು ನಾಗರಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಚಿಕಿತ್ಸೆ: ಶಿವಮೊಗ್ಗ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಓರ್ವ ವ್ಯಕ್ತಿಯಲ್ಲಿ ಮಂಗನ ಕಾಯಿಲೆಯಿರುವುದು ದೃಢಪಟ್ಟಿದೆ. ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಶೆಟ್ಟಿಹಳ್ಳಿ ಗ್ರಾಮದಲ್ಲಿ ಈ ಹಿಂದೆ ಮೂರು ಮಂಗಗಳು ಸಾವನ್ನಪ್ಪಿದ್ದು, ಆದರೆ ಕೆಎಫ್‍ಡಿ ದೃಢಪಟ್ಟಿರಲಿಲ್ಲ. ಪ್ರಸ್ತುತ ಕೆಎಫ್‍ಡಿ ಕಾಣಿಸಿಕೊಂಡಿರುವ ವ್ಯಕ್ತಿಯು ತೀರ್ಥಹಳ್ಳಿ ತಾಲೂಕಿನ ಬಾಳೇಕೊಪ್ಪ ಅರಣ್ಯಕ್ಕೆ ಸೊಪ್ಪು ತರಲು ಹೋಗುತ್ತಿದ್ದರು. ಈ ವೇಳೆ ಅವರಿಗೆ ಕೆಎಫ್‍ಡಿ ತಗುಲಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೆಎಫ್‍ಡಿಯಿಂದ 11 ಜನರು ಮೃತಪಟ್ಟಿರುವುದು ಖಚಿತವಾಗಿದೆ. ಎರಡು ಪ್ರಕರಣಗಳ ವರದಿ ಇನ್ನಷ್ಟೆ ಬರಬೇಕಿದೆ ಎಂದು ಇದೇ ಸಂದರ್ಭದಲ್ಲಿ ಡಿಹೆಚ್‍ಓ ಡಾ. ರಾಜೇಶ್ ಸುರಗೀಹಳ್ಳಿಯವರು ತಿಳಿಸಿದ್ದಾರೆ. 

ಕೆಎಫ್‍ಡಿ ಪತ್ತೆ

ಸಾಗರ ತಾಲೂಕಿನ ಕಾರ್ಗಲ್‍ನ ಕೆಪಿಸಿ ಕಾಲೋನಿಯ ಪ್ಯಾಡಿಫೀಲ್ಡ್‍ನ ನಿವಾಸಿ ಡೀನಾ ಗ್ಲೋರಿ ಚಿದಂಬರಂ ಅವರಲ್ಲಿ ಜ್ವರ ಕಾಣಿಸಿಕೊಂಡಿದ್ದು, ತಪಾಸಣೆಯ ವೇಳೆ ಅವರ ರಕ್ತದಲ್ಲಿ ಕೆಎಫ್‍ಡಿ ವೈರಸ್ ಪತ್ತೆಯಾಗಿದೆ. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಮಂಗನ ಕಾಯಿಲೆಯ ರೋಗ ನಿರೋಧಕ ಚುಚ್ಚುಮದ್ದನ್ನು ಪ್ರಥಮ ಹಂತದಲ್ಲಿ ಪಡೆದಿದ್ದು, 2 ನೇ ಹಂತದಲ್ಲಿ ಪಡೆದಿರಲಿಲ್ಲ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News