ಮೋದಿ ಬಂಡವಾಳ ಶಾಹಿಗಳ ಚೌಕಿದಾರ್: ಎಸ್‍ಯುಸಿಐ ಮುಖಂಡ ಕೆ.ಸೋಮಶೇಖರ್

Update: 2019-04-25 17:03 GMT

ಮೈಸೂರು,ಎ.25: ಪ್ರಧಾನಿ ನರೇಂದ್ರ ಮೋದಿ ಬಡವರು ಮತ್ತು ನೊಂದವರ ಚೌಕಿದಾರ್ ಆಗುವ ಬದಲು ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಚೌಕಿದಾರ್ ಆಗಿದ್ದಾರೆ ಎಂದು ಎಸ್‍ಯುಸಿಐ ಕಮ್ಯೂನಿಸ್ಟ್ ಪಕ್ಷದ ರಾಜ್ಯಪ್ರಧಾನ ಕಾರ್ಯದರ್ಶಿ ಕೆ.ಸೋಮಶೇಖರ್ ಕಿಡಿಕಾರಿದರು.

ನಗರದ ಹೋಟೆಲ್ ಗೋವರ್ಧನ್ ನಲ್ಲಿ ನಡೆದ ಎಸ್‍ಯುಸಿಐ ಕಮ್ಯೂನಿಸ್ಟ್ ಪಕ್ಷದ 71 ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕ್ರಾಂತಿಕಾರಿ ಪಂಥದ ಅನುಶೀಲನ್ ಸಮಿತಿಯ ಕಾರ್ಯಕರ್ತರಾಗಿದ್ದ ಶಿವದಾಸ್ ಘೋಷ್‍ ಅವರು 1948 ರಲ್ಲಿ ಎಸ್ಯುಸಿಐ ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪಿಸಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ಅವರಿಗೆರಾಜಕೀಯ ಸ್ವಾತಂತ್ರ್ಯವು ಭಾರತದ ಬಂಡವಾಳಶಾಹಿ ವರ್ಗಕ್ಕೆ ಹಸ್ತಾಂತರವಾಗಿದೆ ಎಂಬುದು ಸ್ವಷ್ಟವಾಗಿ ಗ್ರಹಿಕೆಯಾಗಿತ್ತು. ನಂತರ ದುಡಿಯುವ ವರ್ಗದ ನೈಜ ವಿಮುಕ್ತಿಗಾಗಿ, ನೈಜ ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪಿಸಿದರು. ಹೋರಾಟದ ಈ ಪ್ರಕ್ರಿಯೆಯಲ್ಲಿ ಅವರು ಮಹಾನ್ ಮಾರ್ಕ್ಸ್ ವಾದಿ ತತ್ವಜ್ಞಾನಿಯಾಗಿ ಹೊರಹೊಮ್ಮಿದರು. ಇಂದು, ಭಾರತದ ರಾಜಕೀಯ ಪರಿಸ್ಥಿಯನ್ನು ಅವಲೋಕಿಸಿದರೆ, ಈ ಪ್ರಜಾಪ್ರಭುತ್ವವು ಬಂಡವಾಳಶಾಹಿಗಳ ಕೈಗೊಂಬೆ ಎಂಬುದು ಗೋಚರವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಬಡವ ಮತ್ತು ಶ್ರೀಮಂತ ಎಂಬ ಎರಡು ವರ್ಗಗಳಿದ್ದು, ನಮ್ಮನ್ನಾಳುವ ಸರ್ಕಾರಗಳು ಶ್ರೀಮಂತ ಬಂಡವಾಳಿಗರ ಕೈಗೊಂಬೆಗಳಾಗಿವೆ. ಈ ವರ್ಗ ವಿಭಜಿತ ಸಮಾಜದಲ್ಲಿನ ಶೋಷಕ ಬಂಡವಾಳಶಾಹಿ ವರ್ಗ ಮತ್ತು ಜನದ್ರೋಹಿ ಸರ್ಕಾರದ ನೀತಿಗಳಿಂದಲೇ ಕಳೆದ ಎಪ್ಪತ್ತು ವರ್ಷಗಳಾದರೂ ಜನರು ಇನ್ನೂ ಬಡತನ, ನಿರುದ್ಯೋಗ,ಅಸಮಾನತೆಯಂತಹ ಸಮಸ್ಯೆಗಳನ್ನು ಎದುರಿಸುವಂತಹ ದುಸ್ಥಿತಿ ಬಂದೊದಗಿದೆ ಎಂದು ವಿಷಾದಿಸಿದರು.

ದೇಶದ ಜನಸಾಮಾನ್ಯರಿಗೆ ಅಚ್ಛೇದಿನ್‍ ಗಳನ್ನು ತರುತ್ತೇವೆ ಎಂದು ಆಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಶೀಮಂತರಿಗೆ ಮಾತ್ರ ಅಚ್ಛೇದಿನ್ ತಂದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬಡವರು ಮತ್ತು ನೊಂದ ಜನಗಳ ಚೌಕಿದಾರರಾಗವ ಬದಲು ದೊಡ್ಡ ಬಂಡವಾಳಿಗರ ಚೌಕಿದಾರರಾಗಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಬಿ.ರವಿ ಅವರು ಶಿವದಾಸ್ ಘೋಷ್‍ರವರ ಹೋರಾಟ ಮತ್ತು ಚಿಂತನೆಗಳನ್ನು ನೆನೆದು, ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾ ಅದರ ವಿರುದ್ಧ ಹೋರಾಟ ಕಟ್ಟುವ ಅನಿವಾರ್ಯತೆ ಬಗ್ಗೆ ಮಾತನಾಡಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಂ.ಉಮಾದೇವಿ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಗೂ ಜಿಲ್ಲಾ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಮೇಟಿ, ಸಂಧ್ಯಾ, ಪಿ.ಎಸ್. ಜಿ.ಎಸ್.ಸೀಮಾ , ವಿ.ಯಶೋಧರ್ ಮತ್ತು ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News