ಹಣ ಕದ್ದು ದರೋಡೆ ನಾಟಕ ಸೃಷ್ಟಿಸಿದ್ದ ಪೆಟ್ರೋಲ್ ಬಂಕ್ ನೌಕರ: ಪೊಲೀಸ್ ತನಿಖೆಯಿಂದ ಅಸಲಿಯತ್ತು ಬಯಲು

Update: 2019-04-25 17:23 GMT

ಮೂಡಿಗೆರೆ, ಎ.25: ಪಟ್ಟಣದ ಗಂಗನಮಕ್ಕಿ ಬಡಾವಣೆಯಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಸ್ವತಃ ತಾನೇ ಬಂಕ್‌ನಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಕಳ್ಳ ಬಂದ ಕಳ್ಳ ಎಂದು ಬೊಬ್ಬೆ ಹೊಡೆದು ತನ್ನ ಮೈಕೈಯನ್ನು ಗಾಯಮಾಡಿಕೊಂಡು ನಾಟಕ ಸೃಷ್ಟಿಸಿ ಸದ್ಯ ಪೊಲೀಸರ ಅತಿಥಿಯಾಗಿರುವ ಘಟನೆ ವರದಿಯಾಗಿದೆ.

ಈ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹಳ್ಳದಗಂಡಿ ಗ್ರಾಮದ ನಿವಾಸಿ ಕೃಷ್ಣ(25) ಕಳೆದ ಸೋಮವಾರ ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಕಳ್ಳ ಕಳ್ಳ ಎಂದು ಬೊಬ್ಬೆ ಹೊಡೆದು ಬಂಕ್‌ನಿಂದ ಹೊರಗೆ ಓಡಿಬಂದಿದ್ದ. ಕೃಷ್ಣ ಕೂಗಿದ್ದನ್ನು ಕೇಳಿದ ಅಕ್ಕಪಕ್ಕದ ಅಂಗಡಿಗಳ ಮಾಲಕರು ಸ್ಥಳಕ್ಕೆ ಬಂದು ನೋಡಿದಾಗ ಕೃಷ್ಣನ ಮೈಕೈಗೆ ಗಾಯವಾಗಿ ರಕ್ತ ಸೋರುತ್ತಿತ್ತು ಎನ್ನಲಾಗಿದ್ದು, ಈ ವೇಳೆ ಆತ, ಯಾರೋ ಕಳ್ಳ ಬಂದು ತನ್ನ ಮೇಲೆ ಹಲ್ಲೆ ಮಾಡಿ, ಬಂಕ್‌ನಲ್ಲಿದ್ದ ಹಣವನ್ನೆಲ್ಲ ಕದ್ದೊಯ್ದ ಎಂದು ಹೇಳಿದ್ದ. ಈ ಸುದ್ದಿ ತಿಳಿದ ಪೆಟ್ರೋಲ್ ಬಂಕ್ ಮಾಲಕ ರಾಘವೇಂದ್ರ ಸ್ಥಳಕ್ಕೆ ಬಂದು ಕೃಷ್ಣ ಹೇಳಿದ್ದನ್ನು ನಂಬಿ ಪೊಲೀಸರಿಗೆ ಹಣ ದರೋಡೆಯ ಬಗ್ಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರು ದರೋಡೆ ಕೃತ್ಯದ ಬಗ್ಗೆ ಕೃಷ್ಣ ನೀಡಿದ ಹೇಳಿಕೆ ಮೇಲೆಯೇ ಶಂಕೆಗೊಂಡು ಮೊದಲಿಗೆ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನೇ ವಿಚಾರಣೆಗೊಳಪಡಿಸಿದ್ದಾರೆ.

ಈ ವೇಳೆ ಅವರಿಗೆ ಇದು ಹೊರಗಿನ ಕಳ್ಳನ ಕೃತ್ಯವಲ್ಲ ಬಂಕ್ ಸಿಬ್ಬಂದಿಯೇ ಈ ಕೃತ್ಯ ನಡೆಸಿದ್ದಾರೆಂದು ಶಂಕೆ ಉಂಟಾಗಿ, ಕೃಷ್ಣನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹಣ ಕದ್ದಿರುವುದು ತಾನೇ ಎಂಬುದನ್ನು ಒಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ. ಬಂಧಿತ ಆರೋಪಿ ಕೃಷ್ಣ ಕಳ್ಳತನ ಮಾಡಿದ್ದ 3,44,400 ರೂ. ಪೈಕಿ ಖರ್ಚು ಮಾಡಿ ಉಳಿದಿದ್ದ ಹಣ 2,89,500 ರೂ. ಅನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News