ಬಾಬಾಬುಡಾನ್‌ಗಿರಿ: ಹೊಸ ಆಚರಣೆಗೆ ಅವಕಾಶ ನೀಡದಿರಲು ಅಪರ ಡಿಸಿಗೆ ಮನವಿ

Update: 2019-04-25 17:27 GMT

ಚಿಕ್ಕಮಗಳೂರು, ಎ.25: ಗುರು ದತ್ತಾತ್ರೆಯ ಬಾಬಾ ದರ್ಗಾದಲ್ಲಿ ಸಂಘಪರಿವಾರದ ಕೆಲವು ಕೋಮುವಾದಿಗಳು ಹೊಸ ಹೊಸ ಆಚರಣೆಗೆ ಮುಂದಾಗಿ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಮತ್ತು ದಲಿತ, ಪ್ರಗತಿಪರ ಸಂಘಟನೆಗಳಿಂದ ಅಪರ ಡಿಸಿ ಕುಮಾರ್‌ಗೆ ಗುರುವಾರ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿ ಗೌಸ್‌ಮೊಹಿಯುದ್ದೀನ್, ಬಾಬಾ ಬುಡಾನ್‌ಗಿರಿ ವಿವಾದ ಇತ್ಯರ್ಥ ಸಂಬಂಧ ಕಳೆದ ನಾಲ್ಕು ದಶಕಗಳಿಂದ ಜನಪರ ಚಳವಳಿ ಹಾಗೂ ಕಾನೂನು ಹೋರಾಟ ನಡೆಯುತ್ತಿದೆ. 1985ರಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ಧಾರ್ಮಿಕ ದತ್ತಿ ಆಯುಕ್ತರು 1975ರ ಹಿಂದೆ ಬಾಬಾಬುಡನ್ ಗಿರಿಯಲ್ಲಿ ಯಾವ ಯಾವ ಧಾರ್ಮಿಕ ಆಚರಣೆಗಳಿದ್ದವು ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಮತ್ತು ಸಾರ್ವಜನಿಕ ವಿಚಾರಣೆ ನಡೆಸಿ 1989ನೇ ಫೆ.25ರಂದು ಆದೇಶವನ್ನು ಹೊರಡಿಸಿದೆ. ಆದೇಶದ ಪ್ರಕಾರ ಬಾಬಾಬುಡಾನ್ ದರ್ಗಾದ ಶಾಖಾದ್ರಿ ಅವರ ಸೂಫಿ ಸಂತತಿಯ ಉರುಸ್ ಆಚರಣೆ ಹೊರತುಪಡಿಸಿ ಯಾವುದೇ ದತ್ತ ಜಯಂತಿಯಂತಹ ಆಚರಣೆಗೆ ಅವಕಾಶ ಇಲ್ಲವೆಂದು ದೃಢಪಡಿಸಿದೆ ಎಂದರು.

ಆದರೆ ಸಂಘ ಪರಿವಾರದಕೋಮು ವಾದಿಗಳು ಒಂದಿಲ್ಲೊಂದು ರೀತಿಯಲ್ಲಿ ದತ್ತ ಜಯಂತಿ, ದತ್ತಮಾಲೆ ಅಭಿಯಾನ, ಶೋಭಾಯಾತ್ರೆ, ನಗರ ಸಂಕೀರ್ತನ ಯಾತ್ರೆ, ಅನುಸೂಯಾ ಜಯಂತಿ ಎಂಬ ಹೊಸ ಹೊಸ ಆಚರಣೆ ಮಾಡುವುದರ ಮೂಲಕ ಸೌಹಾರ್ದ ತಾಣವಾದ ಬಾಬಾಬುಡಾನ್ ಗಿರಿಯನ್ನು ಕೇಸರಿಕರಣ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ ಇಲ್ಲಿನ ಅಲ್ಪಸಂಖ್ಯಾತರನ್ನು ಒಂದು ರೀತಿಯಲ್ಲಿ ಭಯದ ವಾತಾವರಣದಲ್ಲಿಡುವಂತೆ ಮಾಡಿದೆ. ಇದನ್ನು ವಿರೋಧಿಸಿ ಚಿಕ್ಕಮಗಳೂರು ಜಿಲ್ಲೆ, ರಾಜ್ಯದ ಸಮಾನ ಮನಸ್ಕರು ಸೇರಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಎಂಬ ಹೆಸರಿನಲ್ಲಿ ಸಂಘ ಪರಿವಾರದ ಕಾರ್ಯಕ್ರಮಗಳನ್ನು ವಿರೋಧಿಸುತ್ತಾ ಬಂದಿದೆ ಎಂದು ಹೇಳಿದರು. ಬಾಬಾಬುಡಾನ್ ಗಿರಿಯ ಸಂಪೂರ್ಣ ಪರಮಾಧಿಕಾರ ತನಗೆ ಒಪ್ಪಿಸಬೇಕೆಂದು ಶಾಖಾದ್ರಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ನ್ಯಾಯಾಲಯದಲ್ಲಿ ದಾವೆ ಇದ್ದಾಗ್ಯೂ ಸಂಘ ಪರಿವಾರದ ಕೆಲವರು ಹುಣ್ಣಿಮೆ ಪೂಜೆ ಎಂಬ ಮತ್ತೊಂದು ಹೊಸ ಆಚರಣೆಯನ್ನು ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಗಿರಿ ಆವರಣದಲ್ಲಿ ಹೋಮ ಹವನಕ್ಕೆ ಅವಕಾಶ ನೀಡಬೇಕೆಂದು ಸಂಘಪರಿವಾರ ಪದೇ ಪದೇ ತಕರಾರು ತೆಗೆಯುತ್ತಿದೆ ಎಂದ ಅವರು, ಸಂಘ ಪರಿವಾರದ ಆಚರಣೆಗಳ ವೇಳೆ ಅಲ್ಪಸಂಖ್ಯಾತರನ್ನು, ಅಧಿಕಾರಿಗಳನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುತ್ತ ಶಾಂತಿಯಿಂದ ಇರುವ ಜಿಲ್ಲೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಆದ್ದರಿಂದ ಬಾಬಾಬುಡಾನ್‌ಗಿರಿಯ ಸೌಹಾರ್ದ ಪರಂಪರೆ ಆಯ್ದುಕೊಳ್ಳುವ ಸಲುವಾಗಿ ಸಂಘಪರಿವಾರದ ಯಾವುದೇ ಹೊಸ ಆಚರಣೆಗೆ ಅಲ್ಲಿ ಅವಕಾಶ ನೀಡಬಾರದು. ಈ ನೆಪದಲ್ಲಿ ಕೋಮುಗಲಭೆ ಸೃಷ್ಟಿಸುವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲಿಗೆ ಬರುವ ಎಲ್ಲ ಧರ್ಮಗಳ ಭಕ್ತರು ಮತ್ತು ಪ್ರವಾಸಿ ಗರಿಗೆ ಭಯದ ವಾತಾವರಣ ಇಲ್ಲದಂತೆ ಮುಕ್ತ ಅವಕಾಶ ವನ್ನು ಕಲ್ಪಿಸಿಕೊಡಬೇಕಾಗಿ ಜಿಲ್ಲಾಡಳಿತ ಹಾಗೂ ಸರಕಾರ ವನ್ನು ಮನವಿ ಮಾಡಲಾಗಿದೆ ಎಂದು ಗೌಸ್ ತಿಳಿಸಿದರು.

ಈ ವೇಳೆ ಯೂಸುಫ್ ಹಾಜಿ, ರಘು, ಹಸನಬ್ಬ, ಮುನ್ನಾ, ಗಣೇಶ್, ಈಶ್ವರಪ್ಪ, ವಸಂತ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News