ಬಂಧಿತ ಪಂಚೆನ್ ಲಾಮ ಬಿಡುಗಡೆಗೆ ಟಿಬೆಟ್ ಯುವ ಕಾಂಗ್ರೆಸ್, ಮಹಿಳಾ ಟಿಬೆಟ್ ಸಂಘಟನೆ ಒತ್ತಾಯ

Update: 2019-04-25 17:56 GMT

ಮಡಿಕೇರಿ,ಎ.25: ಕಳೆದ 24 ವರ್ಷಗಳಿಂದ ಚೀನಾ ಸರಕಾರ ರಾಜಕೀಯ ಖೈದಿಯಾಗಿ ಬಂಧಿಸಿರುವ ಪಂಚೆನ್ ಲಾಮ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಪ್ರಾಂತೀಯ ಟಿಬೇಟ್ ಯುವ ಕಾಂಗ್ರೆಸ್ ಮತ್ತು ಮಹಿಳಾ ಟಿಬೆಟ್ ಸಂಘಟನೆಗಳು ಒತ್ತಾಯಿಸಿದೆ.

ಕುಶಾಲನಗರ ಸಮೀಪ ಬೈಲುಕೊಪ್ಪೆಯ ಸಂಘಟನೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ, ತಶಿ ಲೊಂಪೊ ಬೌದ್ಧ ಮಂದಿರ ಧರ್ಮಗುರುಗಳಾದ ಕೆಲ್ಕನ್ ರಿಂಪೋಚೆ, 11ನೇ ಪಂಚೆನ್ ಲಾಮ ಮತ್ತು ಅವರ ಪೋಷಕರನ್ನು ಚೀನಾ ಸರಕಾರ ತಮ್ಮ ವಶಕ್ಕೆ ಪಡೆದುಕೊಂಡಿದ್ದು ಇದುವರೆಗೂ ಅವರ ವಾಸ್ತವ ಸ್ಥಿತಿ ಬಗ್ಗೆ ಹೊರ ಜಗತ್ತಿಗೆ ಮಾಹಿತಿ ನೀಡುತ್ತಿಲ್ಲ. ಅವರ ಎಲ್ಲಾ ಹಕ್ಕುಗಳನ್ನು ಮೊಟಕುಗೊಳಿಸಿ ಬಂಧನಕ್ಕೆ ಒಳಪಡಿಸಿದ್ದಾರೆ. ತಮ್ಮ ಸಮುದಾಯದ ಧರ್ಮಗುರುಗಳೆಂದು ಬಿಂಬಿಸಲಾಗಿದ್ದ ಪಂಚೆನ್ ಲಾಮ ಅವರನ್ನು ಕೂಡಲೆ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.

ಚೀನಾ ಸರಕಾರ ಟಿಬೇಟ್‍ನಲ್ಲಿ ಸಂಸ್ಕೃತಿಯ ನಾಶ ಮಾಡುವುದರೊಂದಿಗೆ ಆಕ್ರಮಿಸಿಕೊಂಡು ಚೀನಿಯರಿಗೆ ನೆಲೆ ಕಲ್ಪಿಸುತ್ತಿದೆ ಎಂದು ಆರೋಪಿಸಿದ ಕೆಲ್ಕನ್ ರಿಂಪೋಚೆ, ಕಳೆದ 24 ವರ್ಷಗಳಿಂದ ಇದುವರೆಗೆ ಪಂಚನ್ ಲಾಮ ಅವರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದರು.

ಪ್ರಸಕ್ತ 30 ವರ್ಷ ಪ್ರಾಯದ ಪಂಚೆನ್ ಲಾಮ ಅವರು ಬೌದ್ಧ ಧರ್ಮೀಯರ ಮುಂದಿನ ಪರಮೋಚ್ಚ ಗುರುಗಳಾಗಬೇಕಾಗಿದ್ದು ಅವರ ಧಾರ್ಮಿಕ ಚಟುವಟಿಕೆಗಳಿಗೆ ಕೂಡ ಅಡ್ಡಿ ಮಾಡಿರುವ ಸಾಧ್ಯತೆಯಿದೆ. ಚೀನಾ ಸರಕಾರ ಟಿಬೇಟಿಯನ್ನರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಾ ಬಂದಿದ್ದು ಈ ಬಗ್ಗೆ ವಿಶ್ವ ಸಂಸ್ಥೆಗೆ ಹಲವು ಬಾರಿ ದೂರು ನೀಡಲಾಗಿದೆ ಎಂದಿದ್ದಾರೆ. ಟಿಬೆಟ್ ದೇಶದಲ್ಲಿ ಧಾರ್ಮಿಕ ಮುಖಂಡರುಗಳು ಹಾಗೂ ಕೆಲವು ಪ್ರಮುಖರನ್ನು ರಾಜಕೀಯ ಖೈದಿಗಳನ್ನಾಗಿ ಬಂಧನಕ್ಕೆ ಒಳಪಡಿಸಿದ್ದಾರೆ. ಧರ್ಮ ಕೇಂದ್ರಗಳ ನಾಶ ಮಾಡುತ್ತಿರುವ ಚೀನಾ ಸರಕಾರದ ಚಟುವಟಿಕೆಗಳನ್ನು ನಾವು ಖಂಡಿಸುತ್ತೇವೆ ಎಂದರು.

ಚೀನಾ ದೇಶ ಟಿಬೇಟಿಯನ್ ಧರ್ಮಗುರುಗಳ ಮೇಲೆ ನಡೆಸುತ್ತಿರುವ ದೌರ್ಜನ್ಯಗಳನ್ನು ಪ್ರತಿಭಟಿಸಿ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. 11ನೇ ಪಂಚೆನ್ ಲಾಮಾರ ಶೀಘ್ರ ಬಿಡುಗಡೆಗೆ ಪ್ರಾರ್ಥಿಸಿ ಬೈಲುಕೊಪ್ಪೆಯ ಟಿಬೇಟಿಯನ್ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು. ಈ ಸಂದರ್ಭ ಭಾರತೀಯ ಸಮುದಾಯ ಸೇರಿದಂತೆ ವಿಶ್ವದ ಜನರ ಸಹಕಾರ ತಮಗೆ ಅವಶ್ಯಕತೆಯಿದೆ ಎಂದು ಸಹಾಯ ಕೋರಿದರು. 

ಸುದ್ದಿಗೋಷ್ಠಿಯಲ್ಲಿ ಟಿಬೇಟಿಯನ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಯಪ್ ಜನಿಯಲ್ ಮತ್ತು ಟಿಬೇಟಿಯನ್ ಮಹಿಳಾ ಘಟಕದ ಅಧ್ಯಕ್ಷೆ ತಶಿ ಚೋಡನ್ ಹಾಜರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News