ರಮೇಶ್ ಜಾರಕಿಹೊಳಿ ಬಂಡಾಯವನ್ನು ಪಕ್ಷ ಸರಿಪಡಿಸಲಿದೆ: ಡಾ.ಜಿ.ಪರಮೇಶ್ವರ್

Update: 2019-04-26 12:44 GMT

ಬೆಳಗಾವಿ, ಎ. 26: ಗೋಕಾಕ್ ಕ್ಷೇತ್ರದ ರಮಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಹೇಳುತ್ತಿದ್ದು, ರಾಜೀನಾಮೆ ಕೊಟ್ಟರೆ ಮುಂದೇನು ಕ್ರಮ ಕೈಗೊಳ್ಳಬೇಕು ಎಂದು ಯೋಚಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಖಾನಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಒಂದು ವೇಳೆ ರಮೇಶ್ ಜಾರಕಿಹೊಳಿ ಪಕ್ಷದಲ್ಲಿಯೇ ಉಳಿದರೆ ಅವರಿಗೆ ಏನು ಕೆಲಸ ಕೊಡಬೇಕೆಂದು ಪಕ್ಷ ಆಲೋಚಿಸಲಿದೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.

ರಮೇಶ್ ಜಾರಕಿಹೊಳಿ ಬಂಡಾಯವನ್ನು ಪಕ್ಷ ಸರಿಪಡಿಸಲಿದೆ. ಅವರು ಬೆಂಗಳೂರಲ್ಲೇ ಇದ್ದರೂ ನಿನ್ನೆ ನನ್ನ ಸಂಪರ್ಕಕ್ಕೆ ಲಭ್ಯವಾಗಿಲ್ಲ. ಅವರೊಂದಿಗೆ ಚರ್ಚಿಸಲು ನಾನೂ ಪ್ರಯತ್ನ ನಡೆಸಿದೆ ಎಂದು ಪರಮೇಶ್ವರ್ ಇದೇ ವೇಳೆ ಸ್ಪಷ್ಟನೆ ನೀಡಿದರು.

ಶತಮಾನದ ಇತಿಹಾಸವಿರುವ ಪಕ್ಷ ಕಾಂಗ್ರೆಸ್. ನಾನು ಪಕ್ಷಕ್ಕೆ ಏನಾದರೂ ಮಾಡಿಬಿಡುತ್ತೇನೆಂದುಕೊಂಡಿದ್ದರೆ ಅದು ಸಾಧ್ಯವಿಲ್ಲದ ಮಾತಷ್ಟೇ. ನನ್ನಂತಹ ಹಲವು ಮಂದಿ ಇಲ್ಲಿ ಬಂದು ಹೋಗಿದ್ದಾರೆ. ವೈಯಕ್ತಿಕ ವಿಚಾರಗಳನ್ನು ಪಕ್ಷದ ಮಟ್ಟಕ್ಕೆ ತರುವುದು ಸಲ್ಲ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು.

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ನಾನೂ ಚರ್ಚಿಸಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಮೈತ್ರಿ ಸರಕಾರ ಸುಭದ್ರವಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ: ಸಂಸದ ಮುದ್ದಹನುಮೇಗೌಡ ಹಣ ಪಡೆದಿದ್ದಾರೆಂಬ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ದರ್ಶನ ಎಂಬ ಕಾರ್ಯಕರ್ತ ನನ್ನೊಂದಿಗೆ ಓಡಾಡುತ್ತಿದ್ದ. ಆದರೆ, ಈ ಬಗ್ಗೆ ಹೇಳಿಕೆ ನೀಡುವುದು, ಗೊಂದಲ ಸೃಷ್ಟಿ ಸರಿಯಲ್ಲ ಎಂದು ಆಕ್ಷೇಪಿಸಿದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಂದ ಹಣ ತೆಗೆದುಕೊಂಡು ತಮ್ಮ ಪಕ್ಷದ ಕೆಲಸ ಮಾಡಬೇಕಾದ ಸ್ಥಿತಿಯಲ್ಲಿ ಮುದ್ದುಹನುಮೇಗೌಡರು ಇಲ್ಲ. ಅವರು ಬಹಳ ವರ್ಷದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದು, ಹಲವು ಸ್ಥಾನಮಾನಗಳನ್ನು ನಿರ್ವಹಿಸಿದ್ದಾರೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News