ರಮೇಶ್ ಜಾರಕಿಹೊಳಿ ಕಾಂಗ್ರೆಸ್ ತ್ಯಜಿಸಲು ಬಿಡುವುದಿಲ್ಲ: ಕಂಪ್ಲಿ ಶಾಸಕ ಗಣೇಶ್

Update: 2019-04-26 14:18 GMT

ಹೊಸಪೇಟೆ, ಎ. 26: ರಮೇಶ್ ಜಾರಕಿಹೊಳಿ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಅವರು ಪಕ್ಷವನ್ನು ತ್ಯಜಿಸಲು ನಾವು ಬಿಡುವುದಿಲ್ಲ. ಅವರ ಮನವೊಲಿಸುತ್ತೇವೆ ಎಂದು ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ಇಂದಿಲ್ಲಿ ತಿಳಿಸಿದ್ದಾರೆ.

ನಿನ್ನೆಯಷ್ಟೇ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಮೇಶ್ ಅವರು ನಮ್ಮ ಸಮುದಾಯದ ಹಿರಿಯರು. ಹೀಗಾಗಿ ನಮ್ಮ ಮನೆಗೆ ಭೇಟಿ ನೀಡಿದ್ದರು. ಅವರು ಬಿಜೆಪಿಗೆ ಹೋಗುವುದಿಲ್ಲ ಎಂದರು.

ನಾನೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನೂ ಯಾವಾಗಲೂ ಕಾಂಗ್ರೆಸ್ ಪಕ್ಷದಲ್ಲೆ ಇರುತ್ತೇನೆ. ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸುಭದ್ರವಾಗಿರಲಿದೆ. ಕಾಂಗ್ರೆಸ್‌ನ ಯಾವುದೇ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ ಎಂದು ನುಡಿದರು.

ನಾನು ಮತ್ತು ಶಾಸಕ ಆನಂದ್ ಸಿಂಗ್ ಇಬ್ಬರೂ ಅಣ್ಣ-ತಮ್ಮರಿದ್ದಂತೆ. ಬಿಡದಿಯ ರೆಸಾರ್ಟ್‌ನಲ್ಲಿ ನಮ್ಮಿಬ್ಬರ ನಡುವಿನ ಗಲಾಟೆ ಆಕಸ್ಮಿಕ. ಆನಂದ್ ಸಿಂಗ್ ಅವರ ಬಗ್ಗೆ ನನಗೆ ಈಗಲೂ ಅಭಿಮಾನವಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.

ಇನ್ನು ಮುಂದೆ ನಾನು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಗಮನಹರಿಸಲಿದ್ದು, ಗಲಾಟೆ ಮತ್ತು ವಿಡಿಯೋ ತುಣುಕು ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಏನೂ ಹೇಳುವುದಿಲ್ಲ ಎಂದ ಅವರು, ಕಾಂಗ್ರೆಸ್ ಪಕ್ಷದಿಂದ ನನ್ನ ಅಮಾನತ್ತು ಆದೇಶ ಹಿಂಪಡೆಯುವ ವಿಶ್ವಾಸವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News