ಅಧಿಕೃತ ಘೋಷಣೆಗೂ ಮೊದಲೇ ಬಿಫಾರಂ ಇಲ್ಲದೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ !
ಹುಬ್ಬಳ್ಳಿ, ಎ. 26: ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭೆ ಉಪ ಚುನಾವಣೆಗೆ ಬಿಎಸ್‌ವೈ ಆಪ್ತ ಎಸ್.ಐ.ಚಿಕ್ಕನಗೌಡರ್ ಬಿಜೆಪಿ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆಗೆ ಮೊದಲೇ ನಾಮಪತ್ರ ಸಲ್ಲಿಸುವ ಮೂಲಕ ಕುತೂಹಲ ಸೃಷ್ಟಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚಿಕ್ಕನಗೌಡರ್‌ಗೆ ಟಿಕೆಟ್ ಅಂತಿಮಗೊಳಿಸಿ ಅವರ ಹೆಸರನ್ನು ವರಿಷ್ಠ ಮಂಡಳಿಗೆ ಶಿಫಾರಸ್ಸು ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ತನಗೆ ಟಿಕೆಟ್ ಅಂತಿಮ ಎಂದು ಭಾವಿಸಿ ಚಿಕ್ಕನಗೌಡರ್ ಇಂದು ತರಾತುರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಯಾವುದೇ ಪಕ್ಷದ ಅಧಿಕೃತ ಅಭ್ಯರ್ಥಿ ಪಕ್ಷದ ಬಿಫಾರಂನೊಂದಿಗೆ ನಾಮಪತ್ರ ಸಲ್ಲಿಸುವುದು ವಾಡಿಕೆ. ಆದರೆ, ಚಿಕ್ಕನಗೌಡರ್ ಬಿಜೆಪಿಯ ಬಿಫಾರಂ ಇಲ್ಲದೆ ಉಮೇದುವಾರಿಕೆ ಸಲ್ಲಿಸಿದ್ದಾರೆ. ಎ.29ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಆದರೆ, ಇಂದು ಒಳ್ಳೆಯ ದಿನ ಎಂಬ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದಾರೆಂದು ಗೊತ್ತಾಗಿದೆ.
ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿಯಾಗಿ ಘೋಷಣೆ ಬಳಿಕ ಎ.29ಕ್ಕೆ ಬೃಹತ್ ಮೆರವಣಿಗೆ ಮೂಲಕ ಮತ್ತೊಮ್ಮೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ಚುನಾವಣೆಯಲ್ಲಿ ಸಿ.ಎಸ್.ಶಿವಳ್ಳಿ ವಿರುದ್ಧ ಚಿಕ್ಕನಗೌಡರ ಕೇವಲ 634 ಮತಗಳ ಅಂತರದಿಂದ ಸೋಲು ಕಂಡಿದ್ದರು.