12ನೇ ಶತಮಾನದಲ್ಲೇ ಬಸವಣ್ಣ ವಚನಾಧಾರಿತ ಸಂವಿಧಾನ ರಚಿಸಿದರು: ಮುಖ್ಯಮಂತ್ರಿ ಚಂದ್ರು

Update: 2019-04-26 16:13 GMT

ಬೆಂಗಳೂರು, ಎ.26: 12ನೇ ಶತಮಾನದಲ್ಲೇ ಬಸವಣ್ಣ ತಮ್ಮ ವಚನಗಳಲ್ಲಿ ಸಾಮಾಜಿಕ ಪಾತಕಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಜತೆಗೆ ಜೀವನಕ್ಕೆ ಬೇಕಾದ ಒಂದು ವಚನಾಧಾರಿತ ಸಂವಿಧಾನವನ್ನೂ ರಚಿಸಿದ್ದಾರೆ ಎಂದು ಚಲನಚಿತ್ರ ನಟ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಯುವ ಸಬಲೀಕರಣ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ‘ಬಾ ಮತ್ತು ಬಾಪು 150’ ವರ್ಷಚಾರಣೆ ನಿಮಿತ್ತ ಆಯೋಜಿಸಿದ್ದ ‘ರಾಜ್ಯಮಟ್ಟದ ಒಂದು ದಿನದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಕಾಲಘಟ್ಟಕ್ಕೆ ತಕ್ಕಂತೆ ಸಪ್ತ ಸೂತ್ರಗಳನ್ನು ನೀಡಿದ್ದಾರೆ. ಆದರೂ ಸಾಮಾಜಿಕ ಬದಲಾವಣೆ ಸಾಧ್ಯವಾಗಿಲ್ಲ. ದೇಶದಲ್ಲಿ ಗಾಂಧಿ ವಿಚಾರಧಾರೆಗಳು ಪಸರಿಸುತ್ತಿದ್ದರೂ ಸಮಾಜದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಯಾಗಿರುವುದು ವಿಪರ್ಯಾಸ ಎಂದು ಹೇಳಿದರು.

ಗಾಂಧಿ ದೇಶಕ್ಕಾಗಿ ಹುತಾತ್ಮರಾದರು. ಸ್ವಾತಂತ್ರಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದರು. ಆದರೆ, ನಾವು ಹೊಟ್ಟೆಗೆ ಹಿಟ್ಟಿಲ್ಲದಿದ್ದಾಗ ಸತ್ಯಾಗ್ರಹ ಮಾಡುತ್ತೇವೆ. ಬಟ್ಟೆ ಕೊಂಡುಕೊಳ್ಳಲು ಹಣ ಇಲ್ಲದಿದ್ದಾಗ ಮಾತ್ರ ಮೈಮೇಲಿನ ಬಟ್ಟೆ ಕಳಚುತ್ತೇವೆ. ಇದು ಸತ್ಯವನ್ನು ಹುಡುಕುವ ಕಾಲಘಟ್ಟವಾಗಿದೆ. ಪ್ರೇತಾತ್ಮರ ಕಡೆಗೆ ಕಾಲಿಟ್ಟಿರುವ ಸಂದರ್ಭದಲ್ಲಿ ಗಾಂಧಿ ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದನ್ನು ಚಿಂತಿಸಬೇಕಿದೆ ಎಂದರು.

ವ್ಯಾಪಾರೀಕರಣ, ಜಾಗತೀಕರಣ, ಉದಾರೀಕರಣದ ಸಂದರ್ಭದಲ್ಲಿ ಮಾತೃಭಾಷೆಗಳು ಸಿಲುಕಿ ನಲುಗುತ್ತಿವೆ. ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸಬೇಕಿದೆ. ಬಹುಸಂಸ್ಕೃತಿಯುಳ್ಳ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಮರೆಯಾದರೆ ನಮ್ಮ ಬದುಕು, ಸಂಸ್ಕೃತಿ, ಪರಂಪರೆ ನಶಿಸಿ ಹೋಗುತ್ತದೆ. ಆಂಗ್ಲ ಭಾಷೆಯ ಮೇಲಿನ ವ್ಯಾಮೋಹ ಪ್ರಾದೇಶಿಕ ಭಾಷೆಯ ಉಳಿವಿಗಾಗಿ ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಮಾಡಬೇಕಾದ ದುಸ್ಥಿತಿಯನ್ನು ತಂದಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಎಂಬುದು ಉದ್ಯೋಗ ಗಿಟ್ಟಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ. ಇಂದು ಪದವಿ ಪಡೆದು ಕೆಲಸ ಪಡೆದುಕೊಳ್ಳಬಹುದು, ವಿದೇಶಕ್ಕೂ ಹೋಗಬಹುದು. ಆದರೆ, ಮಾನವೀಯ ಮೌಲ್ಯ ಬಿತ್ತುವ ಶಿಕ್ಷಣ ಸಿಗುತ್ತಿಲ್ಲ. ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಮೌಲ್ಯಾಧಾರಿತ ಶಿಕ್ಷಣ ನಮಗೆ ಬೇಕಿದೆ ಎಂದು ಚಂದ್ರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News