60ನೇ ದಿನಕ್ಕೆ ಮುಂದುವರೆದ ನ್ಯೂ ಮಿನರ್ವ ಮಿಲ್ ಕಾರ್ಮಿಕರ ಮುಷ್ಕರ
ಹಾಸನ,ಎ.26: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಹೊರವಲಯದ ಕೈಗಾರಿಕ ಪ್ರದೇಶದಲ್ಲಿರುವ ನ್ಯೂ ಮಿನರ್ವ ಮಿಲ್ ವರ್ಕರ್ಸ್ ಯೂನಿಯನ್ ಕಾರ್ಮಿಕರು ಕಂಪನಿಯ ಮುಂದೆ ಹಮ್ಮಿಕೊಂಡಿರುವ ಅನಿರ್ಧಿಷ್ಟವಧಿ ಮುಷ್ಕರ 60ನೇ ದಿನಕ್ಕೆ ಮುಂದುವರೆದಿದೆ. ಪ್ರತಿಭಟನೆಗೆ ವಿವಿಧ ಸಂಘಟನೆಗಳು, ರಾಜಕೀಯ ಮುಖಂಡರು ಬೆಂಬಲ ನೀಡಿ ಕಂಪನಿಯವರೊಂದಿಗೆ ಚರ್ಚಿಸಿದರೂ ಕಂಪನಿಯವರು ಇವರ ಬೇಡಿಕೆಗೆ ಸ್ಪಂದನೆ ನೀಡದಿರುವುದಕ್ಕೆ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ 60 ದಿನಗಳಿಂದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಕುಳಿತಿದ್ದರೂ ಕಂಪನಿಯ ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಈಗ ಕಂಪನಿಯವರು ನೀಡುತ್ತಿರುವ ಸಂಬಳದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸಮಸ್ಯೆಗಳು ಹೆಚ್ಚಾಗುತ್ತಿವೆ. ನಮಗೆ ನ್ಯಾಯಯುತ ಸಂಬಳ ನೀಡಬೇಕು. ನಮ್ಮ ಬೇಡಿಕೆ ಈಡೇರಿವರೆಗೂ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿದರು.
ಪ್ರತಿಭಟನೆ ಮಾಡುತ್ತಿರುವರ ಮೇಲೆ ಕ್ರಮ ಕೈಗೊಂಡು ವೇತನ ಕಡಿತಗೊಳಿಸಲಾಗುವುದು ಎಂದು ಕಂಪನಿಯ ಮುಂದೆ ನೋಟಿಸ್ ಅಂಟಿಸಿದ್ದಾರೆ. ಆದರೆ ಕಾರ್ಮಿಕರು ಒಗ್ಗಟ್ಟಿನಿಂದ ಇದ್ದು, ಯಾವುದಕ್ಕೂ ಹೆದರುವುದಿಲ್ಲ. ನಮಗೆ ಕೇರಳ ಮಾದರಿಯಲ್ಲಿ ಎನ್‍ಟಿಸಿ ವೇತನ ಪಾವತಿ ಮಾಡಬೇಕು. ಕೆಲಸಗಾರರನ್ನು ಖಾಯಂಗೊಳಿಸಬೇಕು. ವೇತನದ ಒಪ್ಪಂದ ಮತ್ತು ಕಾರ್ಮಿಕರ ಹಲವಾರು ಬೇಡಿಕೆಗಳಾದ 5 ವರ್ಷದ ವೇತನದ ಒಪ್ಪಂದದ ಬಗ್ಗೆ ಇದುವರೆಗೂ ಗಮನ ನೀಡಿರುವುದಿಲ್ಲ. 500 ಜನ ಕಾರ್ಮಿಕರಲ್ಲಿ ಇದುವರೆಗೂ 190 ಜನ ಕಾರ್ಮಿಕರನ್ನು ಮಾತ್ರ ಖಾಯಂ ಮಾಡಲಾಗಿದ್ದು, ಉಳಿದವರನ್ನು ಖಾಯಂ ಮಾಡಲು ಮುಂದಾಗಬೇಕು ಆಗ್ರಹಿಸಿದರು.
ಇಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಟಿಯುಸಿ ರಾಜ್ಯ ಮುಖಂಡ ವಿಜಯಭಾಸ್ಕರ್ ಮಾತನಾಡಿ, ಈಗಾಗಲೇ ಕಾರ್ಮಿಕರ ಬೇಡಿಕೆಗಳ ಬಗ್ಗೆ ಹಲವು ಬಾರಿ ಕಂಪನಿಯೊಂದಿಗೆ ಮಾತನಾಡಿ ವಿವರ ನೀಡಿದ್ದೇವೆ. ಅವರು ಯಾವುದೇ ಒಪ್ಪಂದಕ್ಕೆ ಬಾರದೆ ದಿನದೂಡುತ್ತಿದ್ದಾರೆ. ಇಂದು ಕೂಡ ಕಂಪನಿಯ ಮುಖ್ಯಸ್ಥರೊಂದಿಗೆ ಚರ್ಚಿಸಿದ್ದೇವೆ. ಬೇಡಿಕೆ ಈಡೇರಿಕೆ ಭರವಸೆ ಅಷ್ಟು ಸ್ಪಷ್ಟವಾಗಿ ನೀಡಿಲ್ಲ. ಕಂಪನಿಯವರು ನಮ್ಮ ಹೋರಾಟಕ್ಕೆ ಸ್ಪಂದಿಸಿದರೆ ಪ್ರತಿಭಟನೆ ಹಿಂಪಡೆಯುತ್ತೇವೆ. ಇಲ್ಲವಾದರೆ ನಮಗೆ ನ್ಯಾಯ ಸಿಗುವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ಮುಷ್ಕರದಲ್ಲಿ ನ್ಯೂ ಮಿನರ್ವ ಮಿಲ್ ವರ್ಕರ್ಸ್ ಯೂನಿಯನ್‍ನ ಡೊಂಗ್ರೆ, ಪ್ರಧಾನ ಕಾರ್ಯದರ್ಶಿ ಮಧು, ಉಪಾಧ್ಯಕ್ಷ ಸಂತೋಷ್ , ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಲೋಕೇಶ್ ಇತರರು ಭಾಗವಹಿಸಿದ್ದರು.