×
Ad

ಪುಲ್ವಾಮಾ ದಾಳಿ ಕುರಿತು ಹೇಳಿಕೆ: ಮುಖ್ಯಮಂತ್ರಿ ವಿರುದ್ಧ ಬಿಜೆಪಿ ದೂರು

Update: 2019-04-26 21:57 IST

ಬೆಂಗಳೂರು, ಎ.26: ಪುಲ್ವಾಮಾ ದಾಳಿ ಕುರಿತ ಸಂಚು ತಮಗೆ ಎರಡು ವರ್ಷಗಳ ಹಿಂದೆಯೇ ತಿಳಿದಿತ್ತೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆಂದು ಆರೋಪಿ ಬಿಜೆಪಿ ಪೊಲೀಸ್ ಠಾಣೆಗೆ ದೂರು ನೀಡಿದೆ.

ಶುಕ್ರವಾರ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ ಬಿಜೆಪಿ ಮುಖಂಡ ಚಿ.ನಾ.ರಾಮು, ಮುಖ್ಯಮಂತ್ರಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗಿಂತ ಮೊದಲೇ ಪುಲ್ವಾಮಾ ದಾಳಿ ನಡೆಯುತ್ತೆಂದು ಎರಡು ವರ್ಷಗಳ ಹಿಂದೆಯೇ ನನಗೆ ತಿಳಿದಿತ್ತು. ನಿವೃತ್ತ ಸೇನಾ ಅಧಿಕಾರಿಯೊಬ್ಬರು ನನಗೆ ಈ ವಿಚಾರ ತಿಳಿಸಿದ್ದರು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆದರೆ, ಈ ವಿವರ ತಿಳಿದಿದ್ದರೂ ಅವರು ವಿಚಾರ ಮುಚ್ಚಿಟ್ಟಿದ್ದು ಸರಿಯಲ್ಲ ಎಂದರು.

ಸಂವಿಧಾನ ಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಕೇಂದ್ರ ಸರಕಾರಕ್ಕೆ ಮಾಹಿತಿ ಕೊಡಬೇಕಿತ್ತು. ಅವರು ಈ ಮಾಹಿತಿ ನೀಡಿದ್ದರೆ ಪುಲ್ವಾಮಾ ದಾಳಿ ನಡೆಯುತ್ತಲೇ ಇರಲಿಲ್ಲ ಎಂದು ದೂರಿದರು.

ರಾಷ್ಟ್ರೀಯ ಭದ್ರತಾ ಕಾಯ್ದೆ, ದೇಶದ್ರೋಹ, ಭಯೋತ್ಪಾದಕ ನಿಗ್ರಹ ಕಾಯ್ದೆ, ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ ಅಡಿ ನಾವು ದೂರು ಸಲ್ಲಿಸಿದ್ದೇವೆ. ಅಲ್ಲದೇ, ಭಾರತೀಯ ದಂಡಸಂಹಿತೆ 123, ಕಲಂ 121 ಎ ಅಡಿ ಕ್ರಮಕೈಗೊಳ್ಳಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News