ನ್ಯಾ.ದಿನೇಶ್ ಮಾಹೇಶ್ವರಿ ನಿರ್ಧಾರಗಳು ಅಭಿವೃದ್ಧಿಗೆ ಪೂರಕ: ಎಚ್.ಡಿ.ಕುಮಾರಸ್ವಾಮಿ

Update: 2019-04-26 17:02 GMT

ಬೆಂಗಳೂರು, ಎ.26: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂದರ್ಭದಲ್ಲಿ ದಿನೇಶ್ ಮಾಹೇಶ್ವರಿ ಅವರು ಅತ್ಯುತ್ತಮ ಆದೇಶಗಳ ಮೂಲಕ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಲು ಮಾರ್ಗದರ್ಶನ ತೋರಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. 

ಶುಕ್ರವಾರ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಶುಭಾಶಯ ಮತ್ತು ವಾರ್ಷಿಕ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ನನ್ನ ಸರಕಾರಕ್ಕೆ ಮುಜುಗುರವಾದರೂ ಸದ್ಯ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ದಿನೇಶ್ ಮಾಹೇಶ್ವರಿ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಅಧಿಕಾರಿಗಳಿಗೆ ತಮ್ಮ ಕಾನೂನಾತ್ಮಕ ಆದೇಶಗಳ ಮೂಲಕವೆ ಚಾಟಿ ಏಟುಗಳನ್ನು ಬೀಸಿ ಹಲವು ಬದಲಾವಣೆಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಕಾರಣಕರ್ತರಾದರು. ಈ ಕಾರ್ಯಕ್ರಮಕ್ಕೆ ನಾನು ಮಾಹೇಶ್ವರಿ ಅವರ ಅಭಿಮಾನಿಯಾಗಿ ಬಂದಿದ್ದು, ಅವರಿಂದ ಇನ್ನಷ್ಟು ಆದೇಶಗಳು ಬರಲಿ ಹಾಗೂ ಈ ದೇಶ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹೇಳಿದರು.

ನ್ಯಾಯಾಲಯಗಳು ಉತ್ತಮ ತೀರ್ಪುಗಳನ್ನು ನೀಡಿದರೆ ಜನರಿಗೆ ಎಲ್ಲರಿಂದಲೂ ಅನುಕೂಲವಾಗುತ್ತದೆ. ಅದೇ ರೀತಿಯಾಗಿ ನ್ಯಾಯಾಲಯಗಳಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು. ವಕೀಲರಿಗೆ ಗೌರವ ಧನವನ್ನು ಹೆಚ್ಚಿಸಬೇಕೆಂದು ಬೆಂಗಳೂರು ವಕೀಲರ ಸಂಘವು ಬೇಡಿಕೆಯನ್ನಿಟ್ಟಿತ್ತು. ಆದರೆ, ರೈತರಿಗೆ, ವಸತಿ ರಹಿತ ಜನರಿಗೆ ಹೆಚ್ಚಿನ ಹಣವನ್ನು ಉಪಯೋಗಿಸಿದ್ದರಿಂದ ಪ್ರಸ್ತುತ ಬಜೆಟ್‌ನಲ್ಲಿ ಗೌರವ ಧನವನ್ನು ಹೆಚ್ಚಿಸಲು ಆಗಲಿಲ್ಲ. ಆದರೆ, ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News