×
Ad

ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಿಶ್ಚಿತ: ಶಾಸಕ ಕೆ.ಜಿ.ಬೋಪಯ್ಯ

Update: 2019-04-26 22:41 IST

ಮಡಿಕೇರಿ ,ಎ.26: ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿರುವ ಸಂತ್ರಸ್ತರಿಗೆ ನೂತನ ಮನೆಗಳನ್ನು ನಿರ್ಮಿಸಿಕೊಡುವುದು ಸೇರಿದಂತೆ ಪರಿಹಾರ ಕಾರ್ಯಗಳು ಇನ್ನೂ ಕೂಡ ಪೂರ್ಣಗೊಂಡಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ವತಿಯಿಂದ ಹೋರಾಟವನ್ನು ರೂಪಿಸಲಾಗುವುದೆಂದು ತಿಳಿಸಿದ್ದಾರೆ.

ನಗರದ ಬಾಲಭವನದಲ್ಲಿ ನಡೆದ ಮಡಿಕೇರಿ ತಾಲೂಕು ಬಿಜೆಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಪ್ರತಿಭಟನೆಯ ಹಾದಿ ಹಿಡಿಯಲಿದೆ ಎಂದರು. ಮತ್ತೊಂದು ಮಳೆಗಾಲ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ, ಆದರೂ ಕಳೆದ ವರ್ಷದ ಹಾನಿಯ ಪರಿಹಾರ ಕಾರ್ಯಗಳೇ ಪೂರ್ಣಗೊಂಡಿಲ್ಲ. ಬೆಳೆಹಾನಿ ಪರಿಹಾರಕ್ಕೆಂದು ಕೇಂದ್ರ ಸರ್ಕಾರ ಸುಮಾರು 900 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ. ಈ ಹಣ ಎಲ್ಲಿಗೆ ಹೋಯಿತು  ಎಂದು ಪ್ರಶ್ನಿಸಿದ ಬೋಪಯ್ಯ, ಚುನಾವಣಾ ಫಲಿತಾಂಶದ ನಂತರ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ ಎಂದರು.

ಇಡೀ ದೇಶವೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅತ್ಯಂತ ಗೌರವದಿಂದ ಹಾಗೂ ಪ್ರೀತಿಯಿಂದ ಕಾಣುತ್ತಿದೆ. ಆದರೆ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪ್ರಧಾನಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲಾಗದ ಹೆಚ್.ಡಿ.ದೇವೇಗೌಡರು ಮೋದಿ ಅವರನ್ನು ಏಕವಚನದಲ್ಲಿ ವ್ಯಾಖ್ಯಾನಿಸುವ ಮೂಲಕ ಕೀಳುಮಟ್ಟದ ರಾಜಕೀಯ ಪ್ರದರ್ಶಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಈ ಬಾರಿಯೂ ಕೊಡಗು, ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಲಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಇದು ಬಿಜೆಪಿಗೆ ಲಾಭದಾಯಕವಾಗಲಿದೆ. ಚುನಾವಣೆ ಸಂದರ್ಭವೇ ಪಕ್ಷದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರು ನಿಧನರಾಗಿ ಕಾರ್ಯಕರ್ತರು ಅತೀವ ನೋವನ್ನು ಅನುಭವಿಸಿದರು. ಅಲ್ಲದೆ ಪಕ್ಷದ ಕಾರ್ಯಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲವು ಪ್ರಯತ್ನಗಳು ಕೂಡ ನಡೆಯಿತು. ಆದರೆ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿದ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಿರುವುದು ಶ್ಲಾಘನೀಯವೆಂದರು. 

ಚುನಾವಣೆ ಸಂದರ್ಭ ಅನೇಕ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಮುಂಬರುವ ಗ್ರಾ.ಪಂ. ಚುನಾವಣೆಯ ಸಂದರ್ಭ ಈ ಬಗ್ಗೆ ನಿಗಾ ವಹಿಸಬೇಕು ಮತ್ತು ಇಂತಹ ಪ್ರಯತ್ನಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದು ಬೋಪಯ್ಯ ಕರೆ ನೀಡಿದರು. ದೇಶದಲ್ಲಿ ಬಿಜೆಪಿ ಅಲೆ ರಾರಾಜಿಸುತ್ತಿದ್ದು, ನರೇಂದ್ರಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‍ಗೆ 50 ಸಾವಿರ ಮತಗಳು ಬರಲ್ಲ
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಧಿಕ ಮತದಾನವಾಗಿದ್ದು, ಇದು ಬಿಜೆಪಿ ಅಭ್ಯರ್ಥಿಯ ಗೆಲುವಿನ ಮುನ್ಸೂಚನೆಯಾಗಿದೆ, ಜೆಡಿಎಸ್ ಬೆಂಬಲಿತ ಮೈತ್ರಿ ಅಭ್ಯರ್ಥಿ 50 ಸಾವಿರ ಮತಗಳನ್ನು ಕೂಡ ಪಡೆಯವುದಿಲ್ಲವೆಂದು ವ್ಯಂಗ್ಯವಾಡಿದರು. ಬಿಜೆಪಿ ಪಕ್ಷದ ಮೇಲೆ ರಾಜ್ಯದ ಜನರ ಒಲವಿದ್ದು, ಲೋಕಸಭಾ ಚುನಾವಣೆಯ ನಂತರ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ದೇಶದಲ್ಲಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರಮೋದಿ ಅವರು ಸತತ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ದೇಶದ ಜನರ ಬೆಂಬಲವೂ ಇವರಿಗೆ ದೊರೆತಿದ್ದು, ಮತ್ತೆ ಪ್ರಧಾನಿಯಾಗಿ ದಕ್ಷ ಆಡಳಿತ ನೀಡಲಿದ್ದಾರೆ ಎಂದು ಅಪ್ಪಚ್ಚುರಂಜನ್ ವಿಶ್ವಾಸ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಹಿರಿಯರಾದ ನಾಗೇಶ್ ಕುಂದಲಪಾಡಿ ಮಾತನಾಡಿ, ಚುನಾವಣೆ ಸಂದರ್ಭ ಪ್ರಧಾನಿ ನರೇಂದ್ರಮೋದಿ ಅವರ ಹೆಸರನ್ನೇ ಬಿಂಬಿಸಿಕೊಂಡು ಮತ ಯಾಚನೆ ಮಾಡುತ್ತಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಮತಯಾಚನೆ ಮಾಡುವಾಗ ಪಕ್ಷದ ಅಭ್ಯರ್ಥಿಯ ಸಾಧನೆಯನ್ನೂ ಹೇಳುವುದರೊಂದಿಗೆ ಮೋದಿಯವರ ಹೆಸರನ್ನೂ ಹೇಳಿ. ಬಿಜೆಪಿ ಮತ್ತು ದಿಟ್ಟ ಆಡಳಿತಗಾರ ಮೋದಿ ಅವರ ಹೆಸರು ಜೊತೆಯಲ್ಲಿದ್ದರೆ ತಪ್ಪೇನು ಇಲ್ಲ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ತಾ.ಪಂ. ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ನಾಪಂಡ ರವಿಕಾಳಪ್ಪ, ಶಾಂತೆಯಂಡ ರವಿಕುಶಾಲಪ್ಪ, ತಾಲ್ಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ಉಷಾ, ಅರುಣ್ ಕುಮಾರ್, ನಗರ ಅಧ್ಯಕ್ಷ ಮಹೇಶ್ ಜೈನಿ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News