×
Ad

ರಾಜಕಾರಣಿಗಳು ಹಾಗೂ ಧಾರ್ಮಿಕ ಮುಖಂಡರಿಂದ ಧರ್ಮಗಳ ನಡುವೆ ಕಂದಕ ಸೃಷ್ಠಿ: ಮೋಹನ್ ಆಳ್ವ

Update: 2019-04-27 17:24 IST

ಪುತ್ತೂರು: ರಾಜಕೀಯ ಮುಖಂಡರಿಂದ ಹಾಗೂ ಧಾರ್ಮಿಕ ಮುಖಂಡರಿಂದ ಧರ್ಮಗಳನ್ನು ಒಡೆಯುವ ಕೆಲಸಗಳು ನಡೆಯುತ್ತಿದ್ದು, ಧರ್ಮಗಳ ನಡುವೆ ಕಂದಕವನ್ನು ಸೃಷ್ಠಿಸಲಾಗುತ್ತಿದೆ. ಇದರಿಂದಾಗಿ ನಮ್ಮ ಪೂರ್ವಜರು ಚೆನ್ನಾಗಿ ಕಟ್ಟಿಕೊಟ್ಟಿರುವ ಧರ್ಮಗಳು ಅಪಾರ್ಥವಾಗುತ್ತಿದೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಅವರು ಪುತ್ತೂರಿನ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸಭಾಭವನದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಮಹಾಸಭೆ, ಸನ್ಮಾನ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. 

ನಮ್ಮನ್ನು ಆಳಬೇಕಾದ ರಾಜಕಾರಣಿಗಳು ಜಾತಿ ಧರ್ಮದ ಮಧ್ಯೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. 80 ಸಾವಿರ ವರ್ಷಗಳ ಇತಿಹಾಸವಿರುವ ಧರ್ಮದಲ್ಲಿ ಜಾತಿ ಜಾತಿಗಳ ಮಧ್ಯ ಕಂದಕವನ್ನು ಸೃಷ್ಠಿಸುತ್ತಿರುವುದರಿಂದ ಧರ್ಮ ಅರ್ಥವೇ ದೂರವಾಗುತ್ತಿದೆ ಎಂದ ಅವರು ನಾವೆಲ್ಲರೂ ಸೇರಿಕೊಳ್ಳುವುದೇ ಸಮಾಜದ ಪರಿಕಲ್ಪನೆಯಾಗಿದೆ. ಆದರೆ ಇದೀಗ ಜಾತಿಗಳೇ ಸಮಾಜವಾಗಿ ಮೆರೆಯುತ್ತಿದೆ. ಜಾತಿ ವ್ಯವಸ್ಥೆ ಬಲಾಢ್ಯವಾಗಿ ಬೆಳೆಯುತ್ತಿದೆ. ಇದು ಸಮ ಸಮಾಜದ ಪರಿಕಲ್ಪನೆಗೆ ಮಾರಕವಾಗಿದೆ ಎಂದರು. 

ಕಳೆದು ಹೋದ ಕ್ಷಣಗಳೇ ಅದ್ಬುತ. ಸುಂದರ ಕ್ಷಣಗಳನ್ನು ಅನುಭವಿಸಿದವರು ನಾವು. ಆ ಕ್ಷಣಗಳನ್ನು ಮತ್ತೆ ಪಡೆಯುವುದು ಅಸಾಧ್ಯ. ಸಮಾಜದಲ್ಲಿ ದಿನೇ ದಿನೇ ನಡೆಯುವ ಬದಲಾವಣೆಗಳಿಂದಾಗಿ ನಾವು ಮುಂದೆ ಸವಾಲುಗಳನ್ನು ಎದುರಿಸಬೇಕಾದ ಆತಂಕಗಳು ನಮ್ಮನ್ನು ಕಾಡುತ್ತಿದೆ. ನಾವು ಎಲ್ಲಿ ಮೂಲೆ ಗುಂಪಾಗುತ್ತೇವಾ ಎಂಬ ಆತಂಕ ಮಾತ್ರವಲ್ಲದೆ ನಮ್ಮ ಜೀವನ ಮೌಲ್ಯಗಳನ್ನು ಮುಂದುವರಿಸುವ ಸವಾಲುಗಳು ನಮ್ಮ ಮುಂದಿದೆ ಎಂದು ಹೇಳಿದರು. 
ಶಿಕ್ಷಣ ಕ್ಷೇತ್ರ ಇಂದು ವ್ಯಾಪಾರೀಕರಣದತ್ತ ಸಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ಪ್ರತಿನಿಧಿಗಳು ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಲಗ್ಗೆ ಒಟ್ಟಿದ್ದಾರೆ. ಶಿಕ್ಷಣ ಸಂಸ್ಥೆಯ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಳ್ಳುವಂತಾಗಿದೆ. ಅದೆಷ್ಟೋ ಮಂದಿಗೆ ವಿದ್ಯಾದಾನ ಮಾಡಿರುವ ಕನ್ನಡ ಶಾಲೆಗಳು ಇಂದು ಸೊರಗುತ್ತಿದೆ. ಕನ್ನಡ ಮಾಧ್ಯಮ ಶಾಲೆಗೆ ಒಬ್ಬ ಮಂತ್ರಿಯನ್ನು ನೀಡದ ಸರಕಾರ ಇದೇ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಮಾಡಲು ಮುಂದಾಗಿದೆ. ಪುರಾತನ ಸಾಹಿತ್ಯ ಕಲೆಗಳು ನಿಜವಾದ ಮೌಲ್ಯವನ್ನು ಕಳೆದುಕೊಂಡು ಇಂದು ಆಡಂಬರ, ಮೆರವಣಿಗೆಗೆ ಮಾತ್ರ ಸೀಮಿತವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸನ್ಮಾನ ನೆರವೇರಿಸಿದ ಹಿರಿಯ ಸಾಹಿತಿ, ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ.ಮೊಗಸಾಲೆ ಮಾತನಾಡಿ, ಶಿಕ್ಷಣದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವುದಿರಂದ ನಮ್ಮ ಸಂಸ್ಕೃತಿ, ಪರಂಪರಗೆ ದಕ್ಕೆಯಾಗಿದೆ. ಮಕ್ಕಳ ಆಯ್ಕೆ ಸ್ವಾತಂತ್ರ್ಯವನ್ನು ಹೆತ್ತವರು ಕಸಿದುಕೊಳ್ಳಬಾರದು. ಮಕ್ಕಳ ಮೇಲೆ ಒತ್ತಡ ಹೇರದ ಅವರ ಆಯ್ಕೆಯ ಶಿಕ್ಷಣಕ್ಕೆ ಅವಕಾಶ ನೀಡಬೇಕು. ಶಿಕ್ಷಣ ಸಂಸ್ಕೃತಿ ಕಲೆಯ ಒಂದು ಮೂಲವಾದರೆ ಕೃಷಿ ಸಂಸ್ಕೃತಿಯು ಜೀವನದ ಒಂದು ಮೂಲ. ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಿಕೊಳ್ಳಬೇಕಾಗಿದೆ. ನಿವೃತ್ತ ನೌಕರರ ಸಂಘದಲ್ಲಿ ಕರ್ತವ್ಯದ ವೇಳೆ ಮೇಲಾಧಿಕಾರಿಯಾಗಿದ್ದರೂ ಕೆಲ ಹಂತದ ಗುಮಾಸ್ಥರಾಗಿದ್ದವರು ಎಲ್ಲರು ಸಮಾನರು. ಸ್ವಾತಂತ್ರ್ಯದ ನಿಜವಾದ ಪರಿಕಲ್ಪಣೆ ದೊರೆಯುವುದೇ ನಿವೃತ್ತ ಸರಕಾರಿ ನೌಕರರ ಸಂಘದಲ್ಲಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಐತ್ತಪ್ಪ ನಾಯ್ಕ ಮಾತನಾಡಿ, 1974ರಲ್ಲಿ ಪ್ರಾರಂಭಗೊಂಡಿರುವ ಸಂಘವು ಈ 807 ಮಂದಿ ಸದಸ್ಯರನ್ನು ಹೊಂದಿದೆ. ಸಂಘದಲ್ಲಿ ಪದಾಧಿಕಾರಿಗಳು ನಿಮಿತ್ತ ಮಾತ್ರ. ಸಂಘದ ಬೆಳವಣಿಗೆಯಲ್ಲಿ ಪ್ರತಿಯೊಬ್ಬರು ಸಹಕರಿಸುತ್ತಿದ್ದಾರೆ ಎಂದು ಹೇಳಿದರು. 

ಸನ್ಮಾನ: 
ಈ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್ ನಿವೃತ್ತ ಮಹಿಳಾ ಯೋಧರಾದ ಶಕುಂತಲಾ ಆರ್ಯಾಪು ಹಾಗೂ  ಸವಿತಾ ವಿಕ್ರಂ ಶೆಟ್ಟಿ ಕೋಡಿಂಬಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಹಿರಿಯ ಸಾಹಿತಿ ನಾ.ಮೊಗಸಾಲೆ, ಮಾರ್ಚ್ ಅಂತ್ಯಕ್ಕೆ 90 ವರ್ಷ ಪೂರೈಸಿದ ಸಂಘದ ಸದಸ್ಯರಾದ ಕೆ.ಗಣಪತಿ ಭಟ್, 85 ವರ್ಷ ಪೂರೈಸಿದ ಮಹಾಬಲ ನಾ, 80 ವರ್ಷ ಪೂರೈಸಿದ ಕೆ. ದುಗ್ಗಪ್ಪ ಆಳ್ವ, ಎಂ. ಭಾಸ್ಕರ, ಕೆ. ಶಂಕರನಾರಾಯಣ, 75 ವರ್ಷ ಪೂರೈಸಿದ ಪ್ರೋ. ಎ.ವಿ ನಾರಾಯಣ, ಪ್ರೋ.ವತ್ಸಲಾ ರಾಜ್ಞಿ, ಎನ್.ಶಿವರಾಮ ಭಟ್, ಬಿ.ನಾರಾಯಣ ಐತಾಳ, ಕೆ.ರಘುನಾಥ ರೈ, ಎಂ. ಜಗನ್ನಾಥ ರೈ, ಪಿ.ರಾಮ ರಾವ್, ಬಿ.ಫಲೂಲ್, ಪಿ.ಸೇಸಪ್ಪ ಶೆಟ್ಟಿ, ಸಂಘದ ಕಛೇರಿಗೆ ದೇಣಿಗೆ ನೀಡಿದ ಸದಸ್ಯರಾದ ರಾಮಯ್ಯ ರೈ, ಎಂ.ಎನ್ ಚೆಟ್ಟಿಯಾರ್, ಕೆ.ಎಂ ಭವಾನಿ ಶಂಕರಿ, ಶ್ಯಾಮ ರಾವ್, ನಾಮದೇವ ಭಟ್ ಹಾಗೂ ಸೇಸಪ್ಪ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿ ಡಿ., ಅಂತಾರಾಷ್ಟ್ರೀಯ ಯುವ ವಿಜ್ಞಾನಿ ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ಪದ್ಮ, ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಯುವ ವಿಜ್ಞಾನಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿ ಎ.ಯು ನಚಿಕೇತ್ ಅವರನ್ನು ಅಭಿನಂದಿಸಲಾಯಿತು.

ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರಿಸ್ ಮಸ್ಕರೇನಸ್, ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿದರು. 

ಸುಳ್ಯ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ರಂಗಯ್ಯ, ಸಂಘದ ಪದಾಧಿಕಾರಿಗಳಾದ ಸೂರಪ್ಪ ಗೌಡ, ಗಂಗಯ್ಯ, ಶಂಕರಿ ಎಂ,ಎಲ್ ಭಟ್, ಯಶೋಧ, ಲೀನಾ ಪುಡ್ತಾಡೋ, ಶರತ್ ಕುಮಾರ್ ರಾವ್, ಮಹಾಲಿಂಗೇಶ್ವರ ಭಟ್, ನಿರ್ಮಲಾ ಬಿ.ಕೆ, ಹಾಜಿ ಇಬ್ರಾಹಿಂ ಆತೂರು, ಜಗನ್ನಾಥ ರೈ, ದೇವರಾಜ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ  ಆರ್ಥಿಕ ಸಮಿತಿ ಸಂಚಾಲಕ ಸುಂದರ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಶಿವಾನಂದ ವಂದಿಸಿದರು. ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News