ಮೈಸೂರು: ಕ್ರೈಸ್ತರ ಪ್ರಾರ್ಥನೆ ವೇಳೆ ಚರ್ಚ್ ಬಳಿ ನಿಂತು ಒಗ್ಗಟ್ಟು ಪ್ರದರ್ಶಿಸಲು ಮುಸ್ಲಿಮರಿಗೆ ಕರೆ
ಮೈಸೂರು, ಎ.27: ಶ್ರೀಲಂಕಾ ಸರಣಿ ಸ್ಫೋಟಗಳ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯದ ಜೊತೆ ನಾವಿದ್ದೇವೆ ಎಂದು ಸಾರಲು ರವಿವಾರ ನಗರದ ಸೈಂಟ್ ಫಿಲೋಮಿನಾ ಚರ್ಚಿನಲ್ಲಿ ಬೆಳಗ್ಗೆ 9:30ಕ್ಕೆ ನಡೆಯಲಿರುವ ಪ್ರಾರ್ಥನೆ ವೇಳೆ ಚರ್ಚ್ ಹೊರಗೆ ನಿಂತು ಕ್ರೈಸ್ತರಿಗೆ ಜೊತೆಯಾಗಲು ಮುಸ್ಲಿಮರಿಗೆ ಮೈಸೂರು ವಿಭಾಗದ ಜಮಾತೆ ಇಸ್ಲಾಮಿ ಹಿಂದ್ ನಾಯಕ ಮುನವ್ವರ್ ಪಾಷಾ ಕರೆ ನೀಡಿದ್ದಾರೆ.
ಮುಸ್ಲಿಂ ಸಮುದಾಯ ಹಾಗೂ ಎಲ್ಲಾ ಇತರ ಸಮುದಾಯಗಳು ಈ ದುಃಖಕರ ಸಂದರ್ಭದಲ್ಲಿ ಕ್ರೈಸ್ತರ ಜೊತೆಗಿವೆ ಎಂಬ ಸಂದೇಶವನ್ನು ಸಾರಲು ಈ ಕರೆ ನೀಡಲಾಗಿದೆ ಎಂದು ಮೈಸೂರು ಜಮಾತೆ ಇಸ್ಲಾಮಿ ಹಿಂದ್ ಘಟಕದ ಅಧ್ಯಕ್ಷ ಮುನವ್ವರ್ ಪಾಷಾ ಹೇಳಿದ್ದಾರೆ. “ನಾವೆಲ್ಲರೂ ಜತೆಯಾಗಿದ್ದೇವೆ, ದ್ವೇಷ ಮೂಡಿಸಿ ನಮ್ಮನ್ನು ಪ್ರತ್ಯೇಕಿಸಲಾಗದು'' ಎಂಬ ಸಂದೇಶವನ್ನು ನಾವು ಸಾರಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ನಿಟ್ಟಿನಲ್ಲಿ ಅವರು ಪೋಸ್ಟ್ ಮಾಡಿರುವ ಧ್ವನಿಮುದ್ರಿಕೆ ಸಂದೇಶದಲ್ಲಿ, ನ್ಯೂಜಿಲೆಂಡ್ ದೇಶದ ಎರಡು ಮಸೀದಿಗಳಲ್ಲಿ ಕಳೆದ ತಿಂಗಳು ನಡೆದ ದಾಳಿಯ ನಂತರ ಸಮುದಾಯಕ್ಕೆ ವಿವಿಧ ಇತರ ಸಮುದಾಯಗಳಿಂದ ಅಭೂತಫೂರ್ವ ಬೆಂಬಲ ಲಭಿಸಿದೆ ಎಂದರು. ``ಬಲಪಂಥೀಯ ತೀವ್ರಗಾಮಿ ದಾಳಿಯ ವಿರುದ್ಧ ಎಲ್ಲರೂ ನಮ್ಮ ಸಮುದಾಯದ ಜತೆ ನಿಂತಿದ್ದನ್ನು ನಾವು ನೋಡಿದ್ದೇವೆ ಹಾಗೂ ವಿಶ್ವದ ಹಲವೆಡೆ ಕ್ರೈಸ್ತರು, ಯಹೂದಿಗಳು, ಸಿಖರು ಮುಸ್ಲಿಮರಿಗೆ ಬೆಂಬಲವಾಗಿ ನಿಂತಿದ್ದರು'' ಎಂದು ಅವರು ನೆನಪಿಸಿಕೊಂಡಿದ್ದಾರೆ.