×
Ad

ಪ್ರಿಯಾಂಕ್ ಖರ್ಗೆ ನನ್ನ ಪುತ್ರನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ: ಉಮೇಶ್ ಜಾಧವ್ ಸವಾಲು

Update: 2019-04-27 18:55 IST

ಕಲಬುರಗಿ, ಎ. 27: ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ನನ್ನ ಪುತ್ರನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂದು ಡಾ.ಉಮೇಶ್ ಜಾಧವ್ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚಿಂಚೋಳಿ ಕ್ಷೇತ್ರವನ್ನು ದತ್ತು ಸ್ವೀಕರಿಸುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದು, ಅವರು ದತ್ತು ಸ್ವೀಕರಿಸುವ ಬದಲು ಇದೇ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಆಹ್ವಾನ ನೀಡಿದರು.

ಅಸಮಾಧಾನವಿಲ್ಲ: ನನ್ನ ಪುತ್ರ ಡಾ.ಅವಿನಾಶ್ ಜಾಧವ್‌ಗೆ ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಉಪಚುನಾವಣೆಗೆ ಟಿಕೆಟ್ ನೀಡಿರುವುದಕ್ಕೆ ನನ್ನ ಕುಟುಂಬದಲ್ಲಾಗಲಿ, ಕ್ಷೇತ್ರದಲ್ಲಾಗಲಿ ಯಾವುದೇ ಅಸಮಾಧಾನವಿಲ್ಲ. ನನ್ನ ಪುತ್ರನನ್ನು ಕಣಕ್ಕಿಳಿಸಬೇಕೆಂಬ ಆಸೆ ನನಗಿರಲಿಲ್ಲ. ಕ್ಷೇತ್ರದ ಜನರ ಅಭಿಪ್ರಾಯ ಹಾಗೂ ಹೈಕಮಾಂಡ್ ಸೂಚನೆ ಮೇರೆಗೆ ಕಣಕ್ಕಿಳಿಸುತ್ತಿದ್ದೇನೆ ಎಂದರು.

ನನ್ನ ಸೋದರ ರಾಮಚಂದ್ರ ಜಾಧವ್ ಅವರನ್ನು ಈ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರು ಸ್ಪರ್ಧಿಸುತ್ತಿಲ್ಲ. ಹೀಗಾಗಿ ನನ್ನ ಪುತ್ರನಿಗೆ ಟಿಕೆಟ್ ನೀಡಲಾಗಿದೆ ಎಂದು ಉಮೇಶ್ ಜಾಧವ್ ಸ್ಪಷ್ಟನೆ ನೀಡಿದರು.

ಮಾಜಿ ಸಚಿವ ಸುನೀಲ್ ವಲ್ಯಾಪುರೆ ಅವರು ಉತ್ತಮ ವ್ಯಕ್ತಿ. ಅವರು ನಮ್ಮೊಂದಿಗೆ ಇರಲಿದ್ದು, ಅವರು ನಮ್ಮ ಪುತ್ರನಿಗೆ ಬೆಂಬಲ ನೀಡಲಿದ್ದಾರೆ ಎಂದ ಉಮೇಶ್ ಜಾಧವ್, ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News