11ನೇ ಪಂಚೇನ್ ಲಾಮಾ ಬಿಡುಗಡೆಗೆ ಒತ್ತಾಯ: ಮಂಡ್ಯದಿಂದ ಬೆಂಗಳೂರು ಕಡೆಗೆ ಸಾಗಿದ ಪಾದಯಾತ್ರೆ
ಮಂಡ್ಯ, ಎ.27: ಚೀನಾ ಸರಕಾರ ವಶಕ್ಕೆ ಪಡೆದಿರುವ ಟಿಬೆಟ್‍ನ ಧಾರ್ಮಿಕ ಮುಖಂಡ 11ನೇ ಪಂಚೆನ್ ಲಾಮಾ ಬಿಡುಗಡೆಗೆ ಒತ್ತಾಯಿಸಿ ಇಂಡೋ-ಟಿಬೆಟಿನ್ ಸಂಘಟನೆಯ ಮಹಿಳಾ ಘಟಕ ಮೈಸೂರಿನಿಂದ ಬೆಂಗಳೂರಿಗೆ ನಡೆಸುತ್ತಿರುವ ಪಾದಯಾತ್ರೆ ಶನಿವಾರ ನಗರದಿಂದ ಬೆಂಗಳೂರು ಕಡೆಗೆ ಸಾಗಿತು.
ಮೇ 2ರಂದು ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಶುಕ್ರವಾರ ಮೈಸೂರಿನಿಂದ ನಗರಕ್ಕೆ ಆಗಮಿಸಿದ ಸಂಘಟನೆಯ 100ಕ್ಕೂ ಹೆಚ್ಚು ಸದಸ್ಯರು ವಾಸ್ತವ್ಯ ಹೂಡಿದ್ದು, ಶನಿವಾರ ತಮ್ಮ ಯಾತ್ರೆ ಮುಂದುವರಿಸಿದರು.
1995ರಲ್ಲಿ ಟಿಬೆಟಿನ ಧರ್ಮಗುರು ದಲೈಲಾಮಾ ಅವರು ಟಿಬೆಟ್‍ನ ಧಾರ್ಮಿಕ ಮುಖಂಡರಲ್ಲಿ ಒಬ್ಬರಾದ 11ನೇ ಪಂಚೆನ್ ಲಾಮಾ ಸ್ಥಾನಕ್ಕೆ ಗೆಧೆಮ್ ಚೊಯ್ಕಿ ನ್ಯಾಮಾ ಅವರನ್ನು ಗುರುತಿಸಿದ ಕೂಡಲೇ ಚೀನಾ ದೇಶ ತಮ್ಮ ವಶಕ್ಕೆ ಪಡೆಯಿತು. ಚಂದ್ರಲ್ ರಿನ್ಪೋಚೆ ಹಾಗೂ ಇತರರನ್ನು ದಲೈಲಾಮಾ ಅವರಿಗೆ ಮಾಹಿತಿ ನೀಡಿದ ಕಾರಣಕ್ಕಾಗಿ ಬಂಧಿಸಿ ಶಿಕ್ಷಿಸಿದರು ಎಂದು ಪಾದಯಾತ್ರಿಗಳು ಆರೋಪಿಸಿದರು.
ಪಂಚೆನ್ ಲಾಮಾ ಅವರನ್ನು ಬಂಧಿಸಿದಾಗ ಅವರಿಗೆ ಕೇವಲ 6 ವರ್ಷ ವಯಸ್ಸಾಗಿತ್ತು. ಈಗ 24 ವರ್ಷಗಳಾಗಿವೆ. ಆದರೆ, ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಚೀನಾ ನೀಡುತ್ತಿಲ್ಲ. ಆದ್ದರಿಂದ ಕೂಡಲೇ ಚೀನಾ ದೇಶವು ಪಂಚೆನ್ ಲಾಮಾ ಅವರು ಇರುವಿಕೆ, ವಾಸದ ಸ್ಥಳದ ಮಾಹಿತಿ ಬಹಿರಂಗಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಟಿಬೆಟ್‍ನ ಧಾರ್ಮಿಕ ಪ್ರಭಾವವನ್ನು ಕುಗ್ಗಿಸುವ ಹುನ್ನಾರದಿಂದ ಚೀನಾ ದೇಶವು ಪಂಚೆನ್ ಲಾಮಾ ಅವರನ್ನು ಬಂಧಿಸಿ ಅವರ ಜಾಗಕ್ಕೆ ಚೀನಿಯರ ಪರವಾಗಿರುವ ವ್ಯಕ್ತಿಯನ್ನು ಮುಂದಿನ ಟಿಬೆಟ್ ಬೌದ್ಧ ಮುಖಂಡನನ್ನಾಗಿ ನೇಮಿಸುವ ಉದ್ದೇಶ ಹೊಂದಿದೆ ಎಂದು ಅವರು ದೂರಿದರು.
ಇಂಡೋ-ಟಿಬೆಟಿನ್‍ನ ಸಂಘಟನೆಯ ಮಹಿಳಾ ಘಟಕದ ಕೇಂದ್ರೀಯ ಸದಸ್ಯೆ ತೇಂಜಿನ್ ಡೋಲ್ಮಾ ಪಾದಯಾತ್ರೆಯ ನೇತೃತ್ವ ವಹಿಸಿದ್ದಾರೆ.