×
Ad

ಗೃಹ ಸಚಿವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿ ಪ್ರಕರಣ: ಬಿಜೆಪಿ ವಕ್ತಾರ ಹೇಮಂತ್ ಕುಮಾರ್‌ ಬಂಧನ

Update: 2019-04-27 20:14 IST
ಹೇಮಂತ್ ಕುಮಾರ್‌ ಪ್ರಧಾನಿ ಮೋದಿ ಜೊತೆ (ಫೈಲ್ ಚಿತ್ರ)

ಬೆಂಗಳೂರು, ಎ.27: ಲಿಂಗಾಯತ ಪ್ರತ್ಯೇಕ ಧರ್ಮ ಸಂಬಂಧ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರ ಸೃಷ್ಟಿಸಿದ ಆರೋಪದಡಿ ಬಿಜೆಪಿ ಮಾಧ್ಯಮ ವಕ್ತಾರ ಎಂದು ಹೇಳಿಕೊಂಡಿದ್ದ ಪತ್ರಕರ್ತ ಹೇಮಂತ್ ಕುಮಾರ್‌ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಬಸವೇಶ್ವರ ನಗರದ ನಿವಾಸಿ ಹೇಮಂತ್ ಕುಮಾರ್(57) ಬಂಧಿತ ಆರೋಪಿಯಾಗಿದ್ದು, ಈತ ಬಿಜೆಪಿಯ ಮಾಧ್ಯಮ ವಕ್ತಾರ ಎಂದು ಹೇಳಿಕೊಂಡು ಸುದ್ದಿ ವಾಹಿನಿಗಳ ರಾಜಕೀಯ ಚರ್ಚೆಗಳಲ್ಲಿ ಭಾಗಿಯಾಗುತ್ತಿದ್ದ. ಸದ್ಯ ದೆಹಲಿ ಮೂಲದ ಮಾಸ ಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಈ ಪ್ರಕರಣದ ಸಂಬಂಧ ಈಗಾಗಲೇ ಪೋಸ್ಟ್ ಕಾರ್ಡ್ ನ್ಯೂಸ್ ವೆಬ್‌ಸೈಟ್‌ನ ಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅನ್ನು ಎ.24ರಂದು ಸಿಐಡಿ ಸೈಬರ್ ಘಟಕದ ಪೊಲೀಸರು ಸತತ 4 ಗಂಟೆಗಳ ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು.

ಬಾಯಿ ಬಿಟ್ಟಿದ್ದ?: ಮಹೇಶ್ ವಿಕ್ರಂ ಹೆಗ್ಡೆಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದಾಗ ತಮ್ಮ ವೆಬ್‌ಸೈಟ್‌ಗೆ ನಕಲಿ ಪತ್ರ ರವಾನೆ ಮಾಡಿರುವುದು ಆರೋಪಿ ಹೇಮಂತ್ ಕುಮಾರ್ ಎಂದು ಬಾಯಿಬಿಟ್ಟಿದ್ದ. ಹೀಗಾಗಿಯೇ ಈತನನ್ನು ಸಿಐಡಿ ಬಂಧಿಸಿದೆ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?: ಪ್ರತ್ಯೇಕ ಲಿಂಗಾಯುತ ಧರ್ಮದ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವ ರೀತಿಯಲ್ಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಳಿಕ ಈ ಪತ್ರವು ವೈರಲ್ ಆಗಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಪತ್ರವನ್ನು ನಾನು ಬರೆದಿಲ್ಲ, ಯಾರೋ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವರು ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಎ.30ವರೆಗೂ ಕಸ್ಟಡಿಗೆ

ಆರೋಪಿ ಹೇಮಂತ್ ಕುಮಾರ್‌ನನ್ನು ಸಿಐಡಿ ತನಿಖಾಧಿಕಾರಿಗಳು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಎ.30ರವರೆಗೂ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ನಿಯೋಗದ ದೂರು

ಹೇಮಂತ್‌ ಕುಮಾರ್ ಬಂಧನ ಖಂಡಿಸಿ ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ, ಸುರೇಶ್‌ ಕುಮಾರ್ ಸೇರಿದಂತೆ ಪ್ರಮುಖರು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ, ದೂರು ಸಲ್ಲಿಸಿದರು. ಹೇಮಂತ್ ಕುಮಾರ್‌ನನ್ನು ಉದ್ದೇಶಪೂರ್ವಕವಾಗಿ ಬಂಧಿಸಿದ್ದು, ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ಒತ್ತಡಕ್ಕೆ ಪೊಲೀಸ್ ಇಲಾಖೆ ಮಣಿದಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News