ಚಾಮರಾಜನಗರದ ಹಲವಡೆ ಗಾಳಿ ಮಳೆ: ಧರೆಗುರುಳಿದ ವಿದ್ಯುತ್ ಕಂಬ, ಮರಗಳು

Update: 2019-04-27 16:23 GMT

ಚಾಮರಾಜನಗರ,ಎ.27: ತಮಿಳುನಾಡಿನಲ್ಲಿ ಕಾಣಿಸಿಕೊಂಡಿರುವ ಚಂಡಮಾರುತದ ಪರಿಣಾಮ ಗಡಿ ಚಾಮರಾಜನಗರ ಜಿಲ್ಲೆಯ ಬಹುತೇಕ ಕಡೆ ಭಾರೀ ಗಾಳಿ ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿಸಿಲಿನ ತಾಪದಿಂದ ಬಸವಳಿದಿದ್ದ ಜನತೆಗೆ ಶನಿವಾರ ಸಂಜೆ ಬಿದ್ದ ತುಸು ಮಳೆಯಿಂದಾಗಿ ತಂಪಿನ ವಾತಾವರಣ ಸೃಷ್ಟಿಯಾದರೂ, ಧಗೆಯ ಅನುಭವ ಮಾತ್ರ ಕಡಿಮೆಯಾಗಲಿಲ್ಲ. ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಸಂಪರ್ಕ ಹೊಂದಿರುವ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಮಳೆಯಾಗಿದ್ದು, ತಂಪಿನ ವಾತಾವರಣ ಮೂಡಿದೆ.

ಅದೇ ರೀತಿ ಗುಂಡ್ಲುಪೇಟೆ ತಾಲೂಕಿನ ಕನ್ನೇಗಾಲ, ಭೀಮನಬೀಡು ಬಳಿ ಗಾಳಿ ಸಹಿತ ಮಳೆಯಿಂದಾಗಿ ಅನೇಕ ತೆಂಗಿನ ಮರಗಳು ಧರೆಗುರುಳಿದ್ದು, ಕೆಲವು ಅಂಗಡಿಗಳ ಮೇಲ್ಛಾವಣೆಗಳು ಹಾರಿಹೋಗಿರುವ ಘಟನೆ ನಡೆದಿದೆ. ಒಂದೆರಡು ಕಡೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. 

ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು ಕಡೆಗಳ ಬಹುತೇಕ ಕಡೆ ಸಂಜೆ ವೇಳೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಕಣ್ಣೇಗಾಲ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಮನೆಗಳ ಮೇಲ್ಚಾವಣಿಗಳು ಹಾರಿಹೋಗಿ ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಶನಿವಾರ ಸಂಜೆ ವೇಳೆ ಮಳೆ ಪ್ರಾರಂಭವಾಗುತ್ತಿದ್ದಂತೆ ಬೀಸಿದ ಬಿರುಗಾಳಿಗೆ ಮಹದೇವಸ್ವಾಮಿ ಎಂಬವರ ಮನೆಯ ಮೇಲ್ಚಾವಣಿ ಹಾರಿಹೋಗಿದೆ. ವಿದ್ಯುತ್ ಕಂಬಗಳು ಹಾಗೂ ತೆಂಗಿನ ಮರಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News