ಆನಂದ್ ಸಿಂಗ್ ಜೊತೆ ಭಿನ್ನಾಭಿಪ್ರಾಯವಿಲ್ಲ: ಕಂಪ್ಲಿ ಶಾಸಕ ಗಣೇಶ್

Update: 2019-04-27 16:33 GMT

ಬಳ್ಳಾರಿ, ಎ.27: ನನ್ನ ಮತ್ತು ಆನಂದ್ ಸಿಂಗ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅಂದು ನಡೆದದ್ದು ಸಣ್ಣ ಘಟನೆ. ಆದರೆ, ಯಾವುದೋ ಶಕ್ತಿ ನಮ್ಮ ನಡುವೆ ಕೆಲಸ ಮಾಡಿದೆ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಪ್ರತಿಕ್ರಿಯಿಸಿದ್ದಾರೆ.

ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್‌ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಗಣೇಶ್, ಶನಿವಾರ ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಮನೆಗೆ ಭೇಟಿ ನೀಡಿದ ಗಣೇಶ್, ನಾನು ಬಹಳ ದಿನ ಕಾಲ ಕ್ಷೇತ್ರದಿಂದ ಹೊರಗೆ ಇರುವಂತಾಗಿತ್ತು. ಆದುದರಿಂದ, ನನ್ನ ರಾಜಕೀಯ ಗುರು ಸೂರ್ಯನಾರಾಯಣ ರೆಡ್ಡಿಯವರನ್ನು ಭೇಟಿ ಮಾಡಿ, ಕ್ಷೇತ್ರದ ಅಭಿವೃದ್ಧಿ ಕುರಿತು ಸಲಹೆ ಪಡೆದಿದ್ದೇನೆ ಎಂದು ಅವರು ಹೇಳಿದರು.

ಬಳ್ಳಾರಿ ಲೋಕಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ. ಬಳ್ಳಾರಿ ಹಾಗೂ ಕಂಪ್ಲಿ ಕ್ಷೇತ್ರಕ್ಕೆ ಸೂರ್ಯನಾರಾಯಣ ರೆಡ್ಡಿಯವರ ಅವಶ್ಯಕತೆಯಿದೆ. ರಾಜ್ಯ ಸರಕಾರವು ಇವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಗಣೇಶ್ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸೂರ್ಯನಾರಾಯಣ ರೆಡ್ಡಿ, ಆನಂದ್‌ಸಿಂಗ್ ಹಾಗೂ ಗಣೇಶ್ ನಡುವೆ ಅಂದು ಏನು ನಡೆಯಿತು ಅನ್ನೋದು ಗೊತ್ತಿಲ್ಲ. ಆದರೆ, ಆಕಸ್ಮಿಕವಾಗಿ ನಡೆದ ಘಟನೆ ಅದು. ಇವರಿಬ್ಬರ ನಡುವೆ ಸಂಧಾನ ಮಾಡಲಾಗುವುದು. ಗಣೇಶ್ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿಯಲ್ಲಿ ಇರಬೇಕಿತ್ತು. ಆದರೆ, ಚುನಾವಣೆಯ ನಂತರ ಅವರಿಗೆ ಜಾಮೀನು ಸಿಕ್ಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News