ಚರ್ಮ ಬ್ಯಾಂಕ್ ಯಶಸ್ವಿ ಮೂರು ವರ್ಷ ಪೂರೈಕೆ
ಬೆಂಗಳೂರು, ಎ.27: ದೇಶದ ಎರಡನೆ ಹಾಗೂ ರಾಜ್ಯದಲ್ಲಿ ಮೊದಲ ಬಾರಿಗೆ ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಸ್ಕಿನ್ ಬ್ಯಾಂಕ್’ (ಚರ್ಮ ಬ್ಯಾಂಕ್) ಯಶಸ್ವಿಯಾಗಿ ಮೂರು ವರ್ಷ ಪೂರೈಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(ಬಿಎಂಸಿಆರ್‌ಐ) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮ ದಾನ ಮಾಡುವ ‘ಚರ್ಮ ನಿಧಿ’ 2016ರ ಮಾ.31ರಂದು ಸ್ಥಾಪನೆಗೊಂಡು ಕಾರ್ಯಾರಂಭಿಸಿ ಮೂರು ವರ್ಷ ಪೂರ್ಣಗೊಳಿಸಿದೆ.
ಈ ಮೂರು ವರ್ಷಗಳ ಅವಧಿಯಲ್ಲಿ ಇದುವರೆಗೂ 750 ಕ್ಕೂ ಅಧಿಕ ಚರ್ಮ ನಿಧಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ 98 ಜನರು ಚರ್ಮದಾನ ಮಾಡಿ, ಮತ್ತೊಬ್ಬರ ಜೀವಕ್ಕೆ ರಕ್ಷಣೆ ನೀಡಿದ್ದಾರೆ. ಅದಲ್ಲಿ 70ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ಚರ್ಮ ಕಸಿ ಮಾಡಲಾಗಿದೆ.
ಸ್ಕಿನ್ ಬ್ಯಾಂಕ್‌ನಲ್ಲಿ ಸಂಗ್ರಹಿಸಿರುವ ಚರ್ಮವನ್ನು ವಿಕ್ಟೋರಿಯಾ ಹಾಗೂ ಸೇಂಟ್ ಜಾನ್ಸ್, ಮಣಿಪಾಲ್ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳ ಕಸಿಗಾಗಿ ನೀಡಲಾಗಿದೆ. ಅಲ್ಲದೆ, ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ಕೇಂದ್ರಕ್ಕೆ ಪ್ರತಿ ತಿಂಗಳು 200 ಕ್ಕೂ ಹೆಚ್ಚು ರೋಗಿಗಳು ದಾಖಲಾಗುತ್ತಾರೆ. ಅವರಲ್ಲಿ ಶೇ.40-60ರಷ್ಟು ಸುಟ್ಟಗಾಯ ಆಗಿರುವ ರೋಗಿಗಳಿಗೆ ಈ ಚರ್ಮ ನಿಧಿ ವರದಾನವಾಗಿದೆ ಎಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಚೆನ್ನೈ, ಕೊಯಮತ್ತೂರು, ಮುಂಬೈ ಸೇರಿದಂತೆ ಇತರೆ ಚರ್ಮ ಬ್ಯಾಂಕ್‌ಗಳಿಗೆ ಹೋಲಿಕೆ ಮಾಡಿದರೆ, ಇಲ್ಲಿನ ಚರ್ಮ ನಿಧಿ ಉತ್ತಮವಾಗಿ ನಡೆಯುತ್ತಿದೆ. ವಿಕ್ಟೋರಿಯಾದಲ್ಲಿ ಐದು ರೋಗಿಗಳಿಗೆ ಚರ್ಮ ಕಸಿ ಮಾಡಲಾಗಿದೆ. ಪ್ರತಿದಿನ ಸ್ಕಿನ್ ಬ್ಯಾಂಕ್‌ಗೆ ನಾಲ್ಕೈದು ರೋಗಿಗಳಿಂದ ಬೇಡಿಕೆ ಬರುತ್ತಿದೆ.
ಚರ್ಮ ದಾನಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಅಪಘಾತ, ಮಧುಮೇಹಿಗಳು, ಅಲರ್ಜಿ ಹಾಗೂ ಇತರೆ ದೊಡ್ಡಮಟ್ಟದ ಗಾಯದ ಸಮಸ್ಯೆ ಉಳ್ಳವರಿಗೆ ಚರ್ಮ ನೀಡಲು ಸಾಧ್ಯವಾಗುತ್ತದೆ. ಜನರಲ್ಲಿ ಚರ್ಮ ದಾನದ ಬಗ್ಗೆ ಅರಿವು ಮೂಡಿಸಲು ಹೆಚ್ಚು ಪ್ರಯತ್ನಿಸಲಾಗುತ್ತಿದೆ ಎಂದು ಸ್ಕಿನ್ ಬ್ಯಾಂಕ್‌ನ ಕೋ ಆರ್ಡಿನೇಟರ್ ನಾಗರಾಜ್ ಹೇಳಿದ್ದಾರೆ.
ಸಂರಕ್ಷಣೆ ಹೇಗೆ?: ಚರ್ಮದಾನ ಮಾಡಲು ನೋಂದಣಿ ಮಾಡಿಕೊಂಡವರು ಅವರು ಮೃತರಾದ ಬಳಿಕ ನಿಧಿಗೆ ಮಾಹಿತಿ ನೀಡಬೇಕು. ಮೃತರು ಮರಣಹೊಂದಿದ ಆರು ಗಂಟೆಗಳವರೆಗೂ ಚರ್ಮವನ್ನು ಪಡೆಯಲು ಸಾಧ್ಯವಾಗುತ್ತದೆ. ಚರ್ಮ ಪಡೆಯುವ ಮೊದಲು ರಕ್ತ ಹಾಗೂ ಚರ್ಮದ ಪರೀಕ್ಷೆ ನಡೆಸಲಾಗುತ್ತದೆ.
ಎಚ್‌ಐವಿ/ಏಡ್ಸ್ ಹಾಗೂ ಅಲರ್ಜಿ, ಸ್ಕಿನ್ ಕ್ಯಾನ್ಸರ್ ಸೇರಿದಂತೆ ಮತ್ತಿತರೆ ಚರ್ಮರೋಗ ಕಂಡುಬಂದಲ್ಲಿ ಅವರ ಚರ್ಮ ಮರು ಜೋಡಣೆಗೆ ಸರಿಹೊಂದುವುದಿಲ್ಲ. ಚರ್ಮ ಪಡೆದ ಬಳಿಕ ಅದನ್ನು ರಕ್ತನಿಧಿ ಮಾದರಿಯಲ್ಲಿಯೇ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂರಕ್ಷಣೆ ಮಾಡಲಾಗುತ್ತದೆ. ಅನಂತರ ಅದನ್ನು ವಿವಿಧ ಅವಘಡಗಳಿಂದ ದೇಹ ಸುಟ್ಟವರಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತದೆ.
ಚರ್ಮದಾನ ಯಾರ್ಯಾರು ಮಾಡಬಹುದು?: ಹದಿನೆಂಟು ವರ್ಷದ ಮೇಲ್ಪಟ್ಟ ಆರೋಗ್ಯವಂತರು ಚರ್ಮದಾನ ಮಾಡಬಹುದಾಗಿದೆ. ಮೆದುಳು ನಿಷ್ಕ್ರಿಯಗೊಂಡಿರುವ ವ್ಯಕ್ತಿಗಳು ಅಂಗಾಂಗಗಳ ದಾನ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ಚರ್ಮದಾನ ಮಾಡಲು ಹೆಸರು ನೋಂದಣಿ ಮಾಡಿಕೊಳ್ಳಬಹುದು. ಕುಟುಂಬದವರ ಒಪ್ಪಿಗೆ ಪಡೆದು ಚರ್ಮವನ್ನು ದಾನವಾಗಿ ಪಡೆಯಲಾಗುತ್ತದೆ. ದಾನ ಮಾಡಲಿಚ್ಛಿಸುವ ಆಸಕ್ತರು ದೂ.ಸಂ. 91-80-26701150, 8277576147 ಸಂಪರ್ಕಿಸಬಹುದು ಎಂದು ಸ್ಕಿನ್ ಬ್ಯಾಂಕ್‌ನ ಅಧಿಕಾರಿಗಳು ಹೇಳಿದ್ದಾರೆ.
ಹೆಚ್ಚಿನ ಜನರಿಗೆ ಚರ್ಮದಾನದ ಬಗ್ಗೆ ಜಾಗೃತಿಯಿಲ್ಲ. ಇದರಿಂದಾಗಿ ಕಡಿಮೆ ಪ್ರಮಾಣದಲ್ಲಿ ದಾನಿಗಳು ಬರುತ್ತಿದ್ದಾರೆ. ಆದರೆ, ನಾವು ಹೆಚ್ಚಿನ ಸಂಖ್ಯೆಯಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಹಲವರು ದಾನ ಮಾಡಲು ನೋಂದಣಿ ಮಾಡಿಕೊಂಡರೂ, ನಂತರದ ದಿನಗಳಲ್ಲಿ ದಾನ ಮಾಡಲು ನಿರಾಸಕ್ತಿ ತೋರಿಸುತ್ತಿರುವುದು ಕಂಡುಬಂದಿದೆ. ನೇತ್ರದಾನ, ದೇಹದಾನ ಹಾಗೂ ಅಂಗಾಂಗ ದಾನದಂತೆ ಚರ್ಮ ದಾನ ಮಾಡಿ ರೋಗಿಗಳ ಜೀವ ಉಳಿಸಬೇಕು.
-ಡಾ.ಕೆ.ಟಿ.ರಮೇಶ್, ಮುಖ್ಯಸ್ಥರು, ಬಿಎಂಸಿಆರ್‌ಐ ಪ್ಲಾಸ್ಟಿಕ್ ಸರ್ಜರಿ ಹಾಗೂ ಸುಟ್ಟಗಾಯಗಳ ವಿಭಾಗ