ಚಾಮುಂಡಿ ಬೆಟ್ಟದಲ್ಲಿ ನೀರಿಗಾಗಿ ಗ್ರಾಮಸ್ಥರ ಪ್ರತಿಭಟನೆ
Update: 2019-04-27 22:17 IST
ಮೈಸೂರು,ಎ.27: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೀರಿಗಾಗಿ ಹಾಹಾಕಾರ ಹೆಚ್ಚಾಗಿದ್ದು, ಚಾಮುಂಡೇಶ್ವರಿ ಸನ್ನಿಧಿಯಲ್ಲೂ ನೀರಿನ ಕಾವು ಉಂಟಾಗಿದೆ. ಕುಡಿಯುವ ನೀರಿಗೆ ಆಗ್ರಹಿಸಿ ಚಾಮುಂಡಿ ಬೆಟ್ಟದ ಗ್ರಾಮ ಪಂಚಾಯತ್ ಬಳಿ ತಾವರೆಕಟ್ಟೆ ಗ್ರಾಮಸ್ಥರು ಉಗ್ರ ಪ್ರತಿಭಟನೆ ನಡೆಸಿದ್ದಾರೆ.
ನೀರಿಗಾಗಿ ಬೀದಿಗಿಳಿದಿರುವ ಗ್ರಾಮಸ್ಥರು ಚಾಮುಂಡಿ ಬೆಟ್ಟದ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ರಸ್ತೆ ಮಧ್ಯೆ ಬೆಂಕಿ ಹಾಕಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.
ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರ ಹರಸಾಹಸ ಪಟ್ಟಿದ್ದು, ಚಾಮುಂಡಿ ಬೆಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಪ್ರವಾಸಿಗರಿಗೆ ಟ್ರಾಫಿಕ್ ಜಾಮ್ ಬಿಸಿ ಉಂಟಾಯಿತು.