ಕ್ಷೇತ್ರಕ್ಕೆ ಶಾಸಕ ಸಿ.ಟಿ.ರವಿ ಕೊಡುಗೆ ಶೂನ್ಯ: ಎಚ್.ಎಚ್.ದೇವರಾಜ್

Update: 2019-04-27 16:56 GMT

ಚಿಕ್ಕಮಗಳೂರು, ಎ.27: ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ರಾಜ್ಯ ಸರಕಾರ 50 ಕೋಟಿ ರೂ. ನೀಡಿದೆ. ಈ ಅನುದಾನವನ್ನು ತಾನೇ ತಂದಿದ್ದೇನೆಂದು ಶಾಸಕ ಸಿ.ಟಿ.ರವಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಶಾಸಕರಾಗಿ ಕಳೆದ 15 ವರ್ಷಗಳಿಂದಲೂ ಶಾಸಕ ಸಿ.ಟಿ.ರವಿ ನಾಟಕವಾಡಿ ಜನತೆಯನ್ನು ವಂಚಿಸುತ್ತ ಬಂದಿದ್ದಾರೆ. ಆದರೆ ಇನ್ನು ಮುಂದೆ ನಾಟಕವಾಡಲು ನಾವು ಅವಕಾಶ ನೀಡುವುದಿಲ್ಲ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ವಿಚಾರದಲ್ಲಿ ಶುಕ್ರವಾರ ಶಾಸಕ ಸಿ.ಟಿ.ರವಿ ವೈದ್ಯರು ಹಾಗೂ ಇಂಜಿನಿಯರ್ ಗಳೊಂದಿಗೆ ಸಭೆ ನಡೆಸಿ ನೀಲಿನಕ್ಷೆ ಸಿದ್ಧಪಡಿಸಲು ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ. ಆದರೆ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಅನುದಾನ ಬಿಡುಗಡೆ ಮಾಡಿರುವುದು ರಾಜ್ಯದ ಸಮ್ಮಿಶ್ರ ಸರಕಾರವಾಗಿದೆ. ಈಗ ಸಭೆ ನಡೆಸಿ ನಾಟಕವಾಡುವ ಮೂಲಕ ಸಿ.ಟಿ.ರವಿ ಜನತೆಯ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ವಿಚಾರವಾಗಿ ಹಲವು ಸಂಘಟನೆಗಳು ಸಭೆ ನಡೆಸಿ, ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳ ನಿಯೋಗವೂ ತೆರಳಿತ್ತು. ಹಾಲಿ ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್.ಬೋಜೇಗೌಡ, ಎಸ್.ಎಲ್.ಧರ್ಮೇಗೌಡ ನಿಯೋಗದ ನೇತೃತ್ವ ವಹಿಸಿದ್ದರು. ಮುಖ್ಯಮಂತ್ರಿಗಳ ಮೇಲೆ ವಿಧಾನಪರಿಷತ್ ಸದಸ್ಯರುಗಳು ಒತ್ತಡ ಹಾಕಿ ಬಜೆಟ್‍ನಲ್ಲಿ 50 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು. ಆಗ ಹೋರಾಟವನ್ನು ಶಾಸಕ ಸಿ.ಟಿ.ರವಿ ಟೀಕಿಸಿದ್ದರು. ಸಭೆಯಲ್ಲಿ ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ಸೌಜನ್ಯಕ್ಕಾದರೂ ಶಾಸಕರು ತಮ್ಮ ಪಕ್ಷದ ಮುಖಂಡರನ್ನು ಸಭೆಗೆ ಕಳುಹಿಸಿರಲಿಲ್ಲ. ಈಗ ಅನುದಾನ ಬಿಡುಗಡೆಯಾದ ನಂತರ ಈ ವಿಚಾರದಲ್ಲಿ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾಸ್ಪತ್ರೆಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಟ್ಟಾಗಲೂ ಅದನ್ನು ಬಿಜೆಪಿಯವರು ಟೀಕಿಸಿದ್ದರು. ಕನಿಷ್ಠ 400 ಕೋಟಿ ಬೇಕಾಗಿತ್ತು ಎಂದು ಹೇಳಿದ್ದರು. ಶಾಸಕ ಸಿ.ಟಿ.ರವಿ ಅವರ ಕ್ಷೇತ್ರಕ್ಕೆ ರಾಜ್ಯ ಸಮ್ಮಿಶ್ರ ಸರಕಾರವು ವಿವಿಧ ಯೋಜನೆಗಳಡಿ 200 ಕೋಟಿಗೂ ಹೆಚ್ಚು ಅನುದಾನವನ್ನು ನೀಡಿದೆ. ಓರ್ವ ಶಾಸಕರಾಗಿ ಸಿ.ಟಿ.ರವಿ ಸರಕಾರಕ್ಕೆ ಧನ್ಯವಾದ ಹೇಳಬೇಕಿತ್ತು. ಅದಾವುದನ್ನೂ ಮಾಡದೆ ಈಗ ಎಲ್ಲವೂ ತನ್ನಿಂದಲೇ ಆಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಸಿ.ಟಿ.ರವಿ ಈವರೆಗೆ ಆಡಿರುವ ನಾಟಕವೇ ಸಾಕು. ಜನತೆ ಇನ್ನು ಅವರ ನಾಟಕವನ್ನು ಒಪ್ಪುವುದಿಲ್ಲ. ನಾವೂ ಸಹ ಅವರಿಗೆ ನಾಟಕದ ಮೂಲಕ ಜನತೆಯನ್ನು ದಿಕ್ಕುತಪ್ಪಿಸುವ ಕೆಲಸಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.

ಸಿ.ಟಿ.ರವಿ ಶಾಸಕರಾಗಿ 15 ವರ್ಷವಾಗಿದೆ. ಒಮ್ಮೆ ಸಚಿವರೂ ಆಗಿದ್ದರು. ಶಾಸಕರಾಗಿ ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನು ಎಂಬ ಬಗ್ಗೆ ಅವರು ಹೇಳಬೇಕಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಜಯರಾಜ್ ಅರಸ್, ಆನಂದೇಗೌಡ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯನ್ನು ವರ್ಗೀಕರಿಸುವ ಕೆಲಸಕ್ಕೆ ಸರಕಾರ ಮತ್ತು ಜಿಲ್ಲಾಡಳಿತ ಚಾಲನೆ ನೀಡಿದೆ. ಇದು ಅತ್ಯಂತ ಸ್ವಾಗತಾರ್ಹ ವಿಚಾರ. ಕಂದಾಯ-ಅರಣ್ಯ ಭೂಮಿಯ ವರ್ಗೀಕರಣದಿಂದಾಗಿ ಜಿಲ್ಲೆಯ ಸಾಕಷ್ಟು ಭೂ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಕೂಡಲೇ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿ ಜನತೆಗೆ ಅನುಕೂಲ ಕಲ್ಪಿಸಿಕೊಡಬೇಕು.
- ಎಚ್.ಎಚ್.ದೇವರಾಜ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News