ಮಹಾಮಳೆ ಎದುರಿಸಲು ಕೊಡಗು ಸನ್ನದ್ಧ: ಆತಂಕ ಪಡುವ ಅಗತ್ಯವಿಲ್ಲ- ಜಿಲ್ಲಾಡಳಿತ ಅಭಯ

Update: 2019-04-27 17:50 GMT

ಮಡಿಕೇರಿ, ಎ.27: ಪ್ರಸಕ್ತ ಸಾಲಿನಲ್ಲೂ ಜಿಲ್ಲೆಯಲ್ಲಿ ಮಹಾಮಳೆಯಾದರೆ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ತುರ್ತು ಸೇವೆಗಳನ್ನು ಒದಗಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲವೆಂದು ಜಿಲ್ಲಾಡಳಿತ ಅಭಯ ನೀಡಿದೆ.

ಪ್ರಸಕ್ತ ಸಾಲಿನಲ್ಲಿ ಅತಿವೃಷ್ಟಿಯಿಂದ ಉಂಟಾಗಬಹುದಾದ ಹಾನಿಯ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ವಿಪತ್ತು ಉಂಟಾಗುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ಅಗತ್ಯ ಕ್ರಮ ವಹಿಸಲು ಮುಂಜಾಗ್ರತೆ ವಹಿಸಲಾಗುತ್ತಿದೆ.

ಜಿಲ್ಲಾಡಳಿತದ ವತಿಯಿಂದ ತುರ್ತು ಪರಿಸ್ಥಿತಿ ಪರಿಹಾರ ಮತ್ತು ಪುನರ್ ನಿರ್ಮಾಣ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲಿ ಹಿರಿಯರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡವು ಸಾರ್ವಜನಿಕರಿಗೆ ಅಗತ್ಯ ಮಾಹಿತಿ, ಸಲಹೆ ನೆರವನ್ನು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಮತ್ತು ಸ್ಥಳಾಂತರಿಸುವ ಸಮಿತಿ, ಶೋಧನೆ ಮತ್ತು ರಕ್ಷಣಾ ಸಮಿತಿ, ಪ್ರಥಮ ಚಿಕಿತ್ಸಾ, ಸಾಮೂಹಿಕ ಅಪಘಾತ ನಿರ್ವಹಣೆ ಸಮಿತಿ, ಆಶ್ರಯ ನಿರ್ವಹಣೆ, ಪರಿಹಾರ ನಿರ್ವಹಣೆ, ಹಾನಿ ಮೌಲ್ಯಮಾಪನ ಸಮಿತಿ, ಪ್ರಾಣಿ ರಕ್ಷಣಾ ಸಮಿತಿ, ಪೌಷ್ಠಿಕ ಆಹಾರ ವಿತರಣಾ ಸಮಿತಿ, ಸ್ವಚ್ಛತಾ ಸಮಿತಿಗಳನ್ನು ರಚಿಸಲಾಗಿದೆ. ಅಲ್ಲದೇ ಇದೇ ಸಮಿತಿಯನ್ನು ತಾಲೂಕು, ಗ್ರಾಮ ಮತ್ತು ಪಂಚಾಯತ್ ಮಟ್ಟದಲ್ಲಿ ಕೂಡ ರಚಿಸಲು ಕ್ರಮ ವಹಿಸಲಾಗಿದೆ.

ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ, ಯೂನಿಸೆಫ್, ಕ್ರೈಸ್ಟ್ ಯೂನಿವರ್ಸಿಟಿ, ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಆಡಳಿತ  ತರಬೇತಿ ಸಂಸ್ಥೆ, ಜಿಲ್ಲಾ ತರಬೇತಿ ಸಂಸ್ಥೆ ಮತ್ತು ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆ ತಯಾರಿಕೆ ಮತ್ತು ತರಬೇತಿಗೆ ಕ್ರಮವಹಿಸಲಾಗಿದೆ. ಅಲ್ಲದೆ ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಗ್ರಾಮ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಎನ್‍ಡಿಆರ್‍ಎಫ್ ನಿಯೋಜನೆ
ಜಿಲ್ಲಾಡಳಿತದ ಕೋರಿಕೆಯಂತೆ ಸರ್ಕಾರ ಎನ್‍ಡಿಆರ್ ಎಫ್‍ನ ಒಂದು ತಂಡವನ್ನು ಪೂರ್ವ ನಿಯೋಜಿತವಾಗಿ ಕೊಡಗು ಜಿಲ್ಲೆಗೆ ಕಳುಹಿಸಿಕೊಡಲಿದೆ. ಈ ತಂಡವು ಮೇ ಕೊನೆಯ ವಾರದಿಂದ ಕಾರ್ಯ ಪ್ರವೃತ್ತವಾಗಿ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಲು ಸಿದ್ದವಿದೆ. ಅತೀ ಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ವರದಿ ಸಲ್ಲಿಸುವ ಬಗ್ಗೆ ಈಗಾಗಲೇ ಜಿಯೋಲಾಜಿಕಲ್ ಸರ್ವೆ ಇಂಡಿಯಾ ಅಧಿಕಾರಿಗಳು ಸರ್ವೆ ನಡೆಸಿದ್ದು, ಅಂತಿಮ ವರದಿಯನ್ನು ನಿರೀಕ್ಷಿಸಲಾಗಿದೆ. ಜಿಎಸ್‍ಐ ನೆರವಿನೊಂದಿಗೆ ವೈಜ್ಞಾನಿಕ ಕ್ರಮದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.

ಅತಿವೃಷ್ಟಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ತುರ್ತು ಸೇವೆಗಳನ್ನು ನೀಡಲು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಸಮಯದಲ್ಲಿ ತುರ್ತು ಸೇವೆ ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News