×
Ad

ಶ್ರೀಲಂಕಾ ಸ್ಫೋಟ ಹಿನ್ನೆಲೆ: ಚರ್ಚ್ ಎದುರು ಒಗ್ಗಟ್ಟಿನ ಸಂದೇಶ ಸಾರಿದ ಮೈಸೂರಿನ ಮುಸ್ಲಿಮರು

Update: 2019-04-28 12:18 IST

ಮೈಸೂರು, ಎ.28: ಶ್ರೀಲಂಕಾದಲ್ಲಿ ಸರಣಿ ಸ್ಫೋಟಗಳ ಹಿನ್ನೆಲೆಯಲ್ಲಿ ನಗರದ ಸೈಂಟ್ ಫಿಲೋಮಿನಾ ಚರ್ಚಿನಲ್ಲಿ ಇಂದು ಬೆಳಗ್ಗೆ ಪ್ರಾರ್ಥನೆಯ ಸಂದರ್ಭ ಮುಸ್ಲಿಮರು ಚರ್ಚ್ ಹೊರಗೆ ನಿಂತು ‘ಕ್ರೈಸ್ತ ಸಮುದಾಯದ ಜೊತೆ ನಾವಿದ್ದೇವೆ’ ಎಂದು ಸಾರಿದರು.

ಶ್ರೀಲಂಕಾದ ಚರ್ಚ್‌ಗಳಲ್ಲಿ ಕಳೆದ ರವಿವಾರ ನಡೆದ ಭಯೋತ್ಪಾದನಾ ದಾಳಿಯಲ್ಲಿ 250ಕ್ಕೂ ಅಧಿಕ ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಮೈಸೂರಿನ ಸೈಂಟ್ ಫಿಲೋಮಿನಾ ಚರ್ಚ್‌ನಲ್ಲಿ ಬೆಳಗ್ಗೆ ನಡೆದ ಪ್ರಾರ್ಥನೆಯ ಸಂದರ್ಭ ಚರ್ಚ್ ಮುಂಭಾಗದಲ್ಲಿ ಮೈಸೂರು ಜಮಾಅತೆ ಇಸ್ಲಾಮಿ ಹಿಂದ್ ಘಟಕದ ನೇತೃತ್ವದಲ್ಲಿ ಸೇರಿದ ಮುಸ್ಲಿಮರು ಕೃತ್ಯವನ್ನು ಖಂಡಿಸಿದರು. ‘‘ಕ್ರೈಸ್ತ ಸಮುದಾಯದೊಂದಿಗೆ ನಾವಿದ್ದೇವೆ. ನಾವೆಲ್ಲರೂ ಜತೆಯಾಗಿದ್ದೇವೆ, ದ್ವೇಷ ಮೂಡಿಸಿ ನಮ್ಮನ್ನು ಪ್ರತ್ಯೇಕಿಸಲಾಗದು’’ ಎಂಬ ಸಂದೇಶವನ್ನು ಸಾರಿದರು.

ಈ ಸಂದರ್ಭ ಮಾತನಾಡಿದ ಮೈಸೂರು ಜಮಾಅತೆ ಇಸ್ಲಾಮಿ ಹಿಂದ್ ಘಟಕದ ಅಧ್ಯಕ್ಷ ಮುನವ್ವರ್ ಪಾಷಾ, ಈಸ್ಟರ್ ಸಂದರ್ಭ ಶ್ರೀಲಂಕಾದ ಕೊಲಂಬೊದಲ್ಲಿ ಚರ್ಚ್‌ಗಳ ನಡೆದಿರುವ ಬಾಂಬ್ ದಾಳಿಯನ್ನು ಜಮಾಅತೆ ಇಸ್ಲಾಮಿ ಹಿಂದ್ ಸೇರಿದಂತೆ ದೇಶಾದ್ಯಂತದ ಮುಸ್ಲಿಮ್ ಸಮುದಾಯ ಖಂಡಿಸಿದೆ. ‘‘ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ಒಂದಾಗಿದ್ದೇವೆ’’ ಎಂಬ ಸ್ಪಷ್ಟ ಸಂದೇಶವನ್ನು ಸಾರುವ ಉದ್ದೇಶದಿಂದ ಇಲ್ಲಿ ಸೇರಿದ್ದೇವೆ ಎಂದರು.
ಡಬ್ಲುಪಿಐ ಮೈಸೂರು ಅಧ್ಯಕ್ಷ ಶೈಖ್ ಝಬೀವುಲ್ಲಾ ಮಾತನಾಡಿದರು.

ಮುಸ್ಲಿಮರ ಈ ಏಕತೆಯ ಪ್ರದರ್ಶನವನ್ನು ಕ್ರಿಶ್ಚಿಯನ್ನರು ಶ್ಲಾಘಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಚರ್ಚ್‌ನ ಧರ್ಮಗುರು ಫಾ.ವಿಲಿಯಮ್ಸ್, ಭಯೋತ್ಪಾದನೆಯ ವಿರುದ್ಧ ಮುಸ್ಲಿಮರು ನೀಡಿರುವ ಸಂದೇಶ ಶ್ಲಾಘನೀಯ. ಅದೇರೀತಿ ಏಕತೆಯನ್ನು ಪ್ರದರ್ಶಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭ ಟಿ.ಎಸ್.ಅನ್ಸಾರ್ ಉಡುಪಿ, ಪ್ರೊ.ನೂರ್ ಅಹ್ಮದ್ ಖಾನ್, ಖಲೀಲುರ್ರಹ್ಮಾನ್, ಮುಹಮ್ಮದ್ ಅಸ್ಲಮ್, ಫಝಲುರ್ರಹ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News