ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಬೈಕ್ ಸವಾರರು ಸಾವು

Update: 2019-04-28 12:52 GMT

ಶಿವಮೊಗ್ಗ, ಏ. 28: ಜಿಲ್ಲೆಯ ಸೊರಬ ಹಾಗೂ ಭದ್ರಾವತಿ ತಾಲೂಕುಗಳಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. 

ಭದ್ರಾವತಿ ವರದಿ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್.ಕೆ.ಜಂಕ್ಷನ್‍ನ ಚೌಡಿ ಕೆರೆಯ ಬಳಿ ಚಾಲನೆಯ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬೈಕ್ ಢಿಕ್ಕಿಯಾದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ವರದಿಯಾಗಿದೆ. ತೋಷಿತ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಇವರು ಬಿಆರ್‍ಪಿಯಿಂದ ಭದ್ರಾವತಿ ಪಟ್ಟಣಕ್ಕೆ ಆಗಮಿಸುವ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಘಟನೆಗೆ ಅಜಾಗರೂಕ, ವೇಗದ ಚಾಲನೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. 

ಸೊರಬ ವರದಿ: ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಮ್ಲಾಪುರ ಗ್ರಾಮದಲ್ಲಿ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ತಿಮ್ಲಾಪುರ ಗ್ರಾಮದ ನಿವಾಸಿ ರಿಯಾಝ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಇವರು ತಿಮ್ಲಾಪುರ ಗ್ರಾಮದಿಂದ ಕಾರ್ಯನಿಮಿತ್ತ ಆನವಟ್ಟಿಗೆ ಬೈಕ್‍ನಲ್ಲಿ ತೆರಳಿ, ಮರಳಿ ಗ್ರಾಮಕ್ಕೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದ ರಿಯಾಝ್ ರನ್ನು ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಲಾರಿ ಚಾಲಕನ ನಿರ್ಲಕ್ಷ್ಯ, ಅತೀವೇಗದ ಚಾಲನೆಯೇ ಅವಘಡಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News