ಮಂಡ್ಯ ಜನ ಈಗಾಗಲೇ ಫಲಿತಾಂಶ ನೀಡಿದ್ದಾರೆ: ಎನ್.ಚಲುವರಾಯಸ್ವಾಮಿ

Update: 2019-04-28 16:20 GMT

ಮಂಡ್ಯ, ಎ.28: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದಿಂದ ದೂರ ಉಳಿದು ಸುದ್ದಿಯಾಗಿರುವ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ರವಿವಾರ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಜತೆ ಕಾಣಿಸಿಕೊಂಡರು.

ನಗರದ ಕನಕಭವನದಲ್ಲಿ ನಡೆದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನ ಮದುವೆಗೆ ಆಗಮಿಸಿದ್ದ ಚಲುವರಾಯಸ್ವಾಮಿ ಮತ್ತು ಸುಮಲತಾ ಅವರು, ಭೇಟಿಯಾಗಿ ಪರಸ್ಪರ ಅಭಿನಂದನೆ ವಿನಿಮಯ ಮಾಡಿಕೊಂಡು ಕೆಲಕಾಲ ಚರ್ಚಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಚಲುವರಾಯಸ್ವಾಮಿ, ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನದ ಚುನಾವಣೆ ಮಾಡಿದ್ದಾರೆ. ಎಲ್ಲಾ ರಿಪೋರ್ಟ್ ಕೂಡ ನಮ್ಮ ಪರ ಬಂದಿದೆ ಅನ್ನೋದನ್ನೂ ಕೇಳಿದ್ದೀವಿ. ಮಂಡ್ಯ ಜನ ಈಗಾಗಲೇ ತಮ್ಮ ಫಲಿತಾಂಶ ನೀಡಿದ್ದಾರೆ. ಫಲಿತಾಂಶ ಬರೋವರೆಗೂ ಕಾಯುವಂತಹ ತಾಳ್ಮೆ ನಮಗಿದೆ ಎಂದರು.

ಸರಕಾರ ಅಷ್ಟೇ ಅಲ್ಲದೇ, ಸುಮಾರು 15-20 ಮುಖಂಡರಿದ್ದರು. ಮಾಜಿ ಪ್ರಧಾನಿ, ಸಿಎಂ, ಸಿಎಂ ಕುಟುಂಬ ಎಲ್ಲವೂ ಮಂಡ್ಯದಲ್ಲಿ ಇತ್ತು. ಹೀಗಿದ್ದೂ ಅವರಿಗೆ ವಿರುದ್ಧ ರಿಪೋರ್ಟ್ ಬಂದರೆ ಯಾರು ಸಹಿಸುತ್ತಾರೆ ಹೇಳಿ. ಎಲ್ಲವೂ ಮತಯಂತ್ರದ ಒಳಗಡೆ ಇದೆ. ಆದರೆ, ಎಲ್ಲರೂ ಅವರಿಗೆ ಬೇಕಾದಂತೆ ಅಭಿಪ್ರಾಯ ಮೂಡಿಸಿಕೊಳ್ಳೋದು ಸಹಜ ಎಂದು ಅವರು ವ್ಯಂಗ್ಯವಾಡಿದರು.

ನಿಖಿಲ್ ಪರ ಹೆಚ್ಡಿಕೆ ಸೇರಿದಂತೆ ಇಡೀ ಸರಕಾರ ದುಡಿದಿದೆ.  ಸುಮಲತಾ ಪರ ದರ್ಶನ್, ಯಶ್ ಸೇರಿ ಅಸಂಖ್ಯಾತ ಜನ ದುಡಿದಿದ್ದಾರೆ. ಕಾದುನೋಡಿ ಫಲಿತಾಂಶದ ಬಗ್ಗೆ ಮಾತಾಡುತ್ತೇವೆ. ಇಡೀ ದೇಶವೇ ಈ ಚುನಾವಣೆಯನ್ನು ನೋಡಿದೆ. ಹೀಗಾಗಿ ಉತ್ತಮವಾದ ಫಲಿತಾಂಶ ಬಂದರೆ ಅರ್ಥ ಇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಮಂಡ್ಯ ಫಲಿತಾಂಶ ರಾಜ್ಯ ಸರಕಾರದ ಮೇಲೆ ಪರಿಣಾಮ ಬೀರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಆ ಬಗ್ಗೆ ಫಲಿತಾಂಶ ಬಂದ ಬಳಿಕ ವಿಶ್ಲೇಷಣೆ ಮಾಡುತ್ತೇವೆ. ಸದ್ಯಕ್ಕೆ ಆ ಬಗ್ಗೆ ನಾನೇನೂ ಮಾತಾಡಲ್ಲ ಎಂದರು. ಅವರು ದೊಡ್ಡವರು. ಅವರೇ ತೀರ್ಮಾನ ಮಾಡುತ್ತಾರೆ ಎಂದು ನಿಖಿಲ್ ಸೋತರೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿರುವ ಸಚಿವ ಪುಟ್ಟರಾಜುಗೆ ತಿರುಗೇಟು ನೀಡಿದರು.

ಸುಮಲತಾ ಅವರಿಗೆ ತಾನು ಬೆಂಬಲ ನೀಡಿದ್ದಾರೆನ್ನುವ ವಿಚಾರದ ಬಗ್ಗೆ ಚರ್ಚೆಯಾಗಲಿ, ಅಭ್ಯಂತರವಿಲ್ಲ. ನಮ್ಮ ಪಕ್ಷ, ಮುಖಂಡರು ತೀರ್ಮಾನ ಮಾಡುತ್ತಾರೆ. ಈಗಾಗಲೇ ಇಬ್ಬರು ಅಭ್ಯರ್ಥಿಗಳೂ ಬೆಟ್ಟಿಂಗ್ ಬೇಡವೆಂದು ಮನವಿ ಮಾಡಿದ್ದಾರೆ. ಹಾಗಾಗಿ ಬೆಟ್ಟಿಂಗ್ ಕಟ್ಟಿರುವವರು ಹಿಂಪಡೆಯುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದರು.

ನನಗೆ ಗೆಲುವಿನ ವಿಶ್ವಾಸವಂತೂ ಇದೆ: ಸುಮಲತಾ

ಸುಮಲತಾ ಅಂಬರೀಷ್ ಮಾತನಾಡಿ, ಒಂದೊಂದು ಸಮೀಕ್ಷೆ ಒಬ್ಬೊಬ್ಬರ ಪರ ಬರುತ್ತಿವೆ. ಸಮೀಕ್ಷೆಗಳನ್ನು ನಾವು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಏನೇ ಇದ್ದರೂ ಮೇ 23ರವರೆಗೆ ಕಾದು ನೋಡೋಣ. ಸಮೀಕ್ಷೆ ಬಗ್ಗೆ ನಾನು ಡೀಪ್ ಆಗಿ ಯೋಚನೆ ಮಾಡಲ್ಲ. ನನಗೆ ಗೆಲುವಿನ ವಿಶ್ವಾಸ ಅಂತೂ ಇದೆ. ನಾನ್ಯಾವುದೇ ಸರ್ವೇ ಮಾಡಿಸಿಲ್ಲ ಎಂದರು.

ಮದುವೆ ಸಮಾರಂಭದಲ್ಲಿ ಚಲುವರಾಯಸ್ವಾಮಿ ನಾನು ಮುಖಾಮುಖಿಯಾಗಿದ್ದೇವೆ. ಆದರೆ, ರಾಜಕೀಯವಾಗಿ ಏನೂ ಮಾತಾಡಿಲ್ಲ. ಚುನಾವಣೆಗೆ ಮುನ್ನವೂ ಅಷ್ಟು ಡೀಪಾಗಿ ಏನೂ ಚರ್ಚೆ ಮಾಡಿಲ್ಲ. ಚುನಾವಣೆ ಮುಗಿದಿದೆ, ಸ್ವಲ್ಪ ರೆಸ್ಟ್ ಮಾಡಿ ಎಂದು ಸಲಹೆ ನೀಡಿದರು. ಇವಾಗ ನನಗೆ ವಿಶ್ರಾಂತಿ ಸಮಯ. ಚುನಾವಣೆ ಬಗ್ಗೆ ಏನೂ ಮಾತಾಡಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News