×
Ad

ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ಗುರಿ ತಲುಪಬಹುದು: ಯುಪಿಎಸ್‍ಸಿ ರ‍್ಯಾಂಕ್ ವಿಜೇತ ರೋಹನ್ ಜಗದೀಶ್

Update: 2019-04-28 22:51 IST

ಮಂಡ್ಯ, ಎ.28: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿದರೆ ತನ್ನ ಗುರಿಯ ಕಡೆಗೆ ತಲುಪಲು ಸಾಧ್ಯವಾಗುತ್ತದೆ. ಕೇವಲ ಆಸೆಯಿಂದ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಯುಪಿಎಸ್‍ಸಿ ಪರೀಕ್ಷೆಯಲ್ಲಿ 224 ನೇ ರ‍್ಯಾಂಕ್ ಪಡೆದ ರೋಹನ್ ಜಗದೀಶ್ ಎಂದು ಹೇಳಿದ್ದಾರೆ.

ಮಂಡ್ಯ ವೈಧ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ಯುಪಿಎಸ್‍ಸಿ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಿತ್ಯ ದಿನಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುವ ಮಾಹಿತಿಗಳನ್ನು ಪಡೆದು ಅಧ್ಯಯನ ಮಾಡುವುದರಿಂದ ಪರೀಕ್ಷೆ ಬರೆಯಲು ಸಹಕಾರಿಯಾಗುತ್ತದೆ ಎಂದರು. 

ನಿತ್ಯ 8 ರಿಂದ 10 ಗಂಟೆಗಳ ಕಾಲ ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಧ್ಯಯನ ನಡೆಸಬೇಕು. ಕ್ರೀಡೆ, ಸಾಹಿತ್ಯ, ಭಾಷೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಆಸಕ್ತಿ ಇದ್ದಲ್ಲಿ ಅಂತಹದನ್ನು ಐಚ್ಚಿಕ ವಿಷಯವಾಗಿ ಪರಿಗಣಿಸಿ ವ್ಯಾಸಂಗ ಮಾಡಬಹುದು ಎಂದು ಅವರು ಸಲಹೆ ನೀಡಿದರು.

ಲೋಕಸೇವಾ ಪರೀಕ್ಷೆಯಲ್ಲಿ 418ನೇ ರ‍್ಯಾಂಕ್‍ ಪಡೆದ ಡಾ. ನಾಗಾರ್ಜುನಗೌಡ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ವೈಧ್ಯರಾಗಿ ಕೆಲಸ ಮಾಡಲು ಕೇವಲ ಪದವಿ ಮಾತ್ರ ಸಾಲುವುದಿಲ್ಲ. ಪ್ರಸ್ತುತ ದಿನಮಾನಗಳಲ್ಲಿ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕಿರುವುದರಿಂದ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆಯಬೇಕಾಗುತ್ತದೆ ಎಂದರು.

ವೈದ್ಯಕೀಯ ಕ್ಷೇತ್ರದ ಯಾವುದೇ ವಿಭಾಗದಲ್ಲಿ ಓದಿ ಸಾಧನೆ ಮಾಡಿದರೂ, ಸಮಾಜದ ಸೇವೆ ಮಾಡಲು ಆಡಳಿತಾತ್ಮಕ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸಮಾಜಕ್ಕೆ ಅಗಾಧವಾದ ಸೇವೆ ಮಾಡಲು ಒಬ್ಬ ಅಧಿಕಾರಿಯಿಂದ ಮಾತ್ರ ಸಾಧ್ಯವಾಗುತ್ತದೆ. ಹೀಗಾಗಿ ವೈದ್ಯಕೀಯ ಸೇವೆಯೊಂದಿಗೆ ಜನರಿಗೆ ಉತ್ತಮ ಸೇವೆ ಒದಗಿಸಲು ಆಡಳಿತ ಸೇವಾ ಪರೀಕ್ಷೆ ಎದುರಿಸಲು ಸಿದ್ಧರಾಗಬೇಕು. ವಿದ್ಯಾರ್ಥಿಗಳು ಕೇವಲ ಪದವಿ ಪಡೆಯಲು ಸೀಮಿತವಾಗದೆ, ದೊಡ್ಡ ಮಟ್ಟದ ಗುರಿ ಸಾಧನೆಗೆ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು. 

495ನೇ ರ‍್ಯಾಂಕ್ ಪಡೆದ ಮಂಜುನಾಥ್ ಮಾತನಾಡಿ, ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳು ಹಾಗೂ ಅನುಭವಗಳು ನಮ್ಮ ಮುಂದಿನ ಭವಿಷ್ಯ ಸಾಮಾಜಿಕವಾಗಿ ಸೇವೆಮಾಡಲು ಅನುಕೂಲವಾಗುತ್ತದೆ. ಜನಸಾಮಾನ್ಯರು ಸರಕಾರದ ಸೌಲಭ್ಯ ಪಡೆಯುವಲ್ಲಿ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ ಎಂಬುದನ್ನು ಕಣ್ಣಾರೆ ಕಂಡು ಸಮಾಜಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ಉಂಟಾಗಿ ಯುಪಿಎಸ್‍ಸಿ ಪರೀಕ್ಷೆ ತೆಗೆದುಕೊಳ್ಳಲು ಪ್ರೇರಣೆ ಹೊಂದಿದ್ದೆ ಎಂದು ವಿವರಿಸಿದರು. 

ಮಿಮ್ಸ್ ಪ್ರಬಾರ ನಿರ್ದೇಶಕ ತ್ರಿನೇಶ್‍ಗೌಡ ಕಾರ್ಯಾಗಾರ ಉದ್ಘಾಟಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಎಂ.ಆರ್.ಹರೀಶ್, ರಾಜೀವ್‍ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ.ಪಿ.ವಿ.ಶ್ರೀಧರ್, ಹಿರಿಯ ನೇತ್ರ ತಜ್ಞ ಡಾ. ಶ್ರೀನಿವಾಸ್, ಮೂಳೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್.ಎಸ್.ರವಿಕುಮಾರ್, ಪಿಆರ್‍ಓ ಉಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News