ರಂಗೇರಿದ ಕುಂದಗೋಳ, ಚಿಂಚೋಳಿ ಉಪಚುನಾವಣಾ ಅಖಾಡ: ಅಭ್ಯರ್ಥಿಗಳಿಂದ ಉಮೇದುವಾರಿಕೆ ಸಲ್ಲಿಕೆ

Update: 2019-04-29 14:10 GMT

ಬೆಂಗಳೂರು, ಎ. 29: ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ಅಭ್ಯರ್ಥಿಗಳು ಭಾರೀ ಶಕ್ತಿ ಪ್ರದರ್ಶನ ನಡೆಸುವ ಮೂಲಕ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಕುಂದಗೋಳ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಸಚಿವ ಎಂ.ಬಿ.ಪಾಟೀಲ್ ಉಪಸ್ಥಿತಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದ ಕುಸುಮಾ ಶಿವಳ್ಳಿ ತಹಶಿಲ್ದಾರ್ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ್ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಮಾಜಿ ಸಿಎಂ ಸಿಎಂ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ನಗರದ ವಿವಿಧ ರಸ್ತೆಗಳಲ್ಲಿ ರ್ಯಾಲಿ ನಡೆಸಿ ಆ ಬಳಿಕ ತಮ್ಮ ನಾಮಪತ್ರ ಸಲ್ಲಿಸಿದರು.

ಅತ್ತ ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗೈರುಹಾಜರಿ ನಡುವೆ ತಹಶಿಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ಅದೇ ರೀತಿ ಬಿಜೆಪಿ ಅಭ್ಯರ್ಥಿಯಾಗಿ ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಸಚಿವ ಸಿ.ಎಸ್.ಶಿವಳ್ಳಿ ನಿಧನ ಹಾಗೂ ಉಮೇಶ್ ಜಾಧವ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಿಗೆ ಮೇ 19ಕ್ಕೆ ಉಪ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಇಂದು(ಎ.29) ಕೊನೆಯ ದಿನವಾಗಿತ್ತು. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಳೆ ಪರಿಶೀಲನೆ: ನಾಳೆ(ಎ.30) ನಾಮಪತ್ರ ಪರಿಶೀಲನೆ ನಡೆಯಲಿದ್ದು, ಮೇ 2ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ. ಎರಡೂ ಕ್ಷೇತ್ರಗಳ ಉಪ ಚುನಾವಣಾ ರಣಕಣ ನಾಳೆಯಿಂದ ರಂಗೇರಲಿದ್ದು, ಪ್ರಚಾರದ ಭರಾಟೆಯೂ ಹೆಚ್ಚಾಗಲಿದೆ.

‘ಕೈ’ ಬಂಡಾಯ: ಕುಂದಗೋಳ ಕ್ಷೇತ್ರದ ಉಪಚುನಾವಣಾ ಟಿಕೆಟ್ ಆಕಾಂಕ್ಷಿ ಶಿವಾನಂದ ಬೆಂತೂರ ಅವರ ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ತಮ್ಮ ಬೆಂಬಲಿಗರೊಂದಿಗೆ ಕುಂದಗೋಳ ತಹಶಿಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ವಿಪಕ್ಷ ಬಿಜೆಪಿ ತಮ್ಮ ತಮ್ಮ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳಿಗೆ ಉಪ ಚುನಾವಣೆ ‘ಮಾಡು-ಇಲ್ಲವೆ ಮಡಿ’ ಎಂಬ ಸ್ಥಿತಿ ನಿರ್ಮಿಸಿದ್ದು, ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

‘ಕುಂದಗೋಳ ಉಪ ಚುನಾವಣೆಗೆ ಕುಸುಮಾ ಶಿವಳ್ಳಿ ಅವರನ್ನು ಕಣಕ್ಕಿಳಿಸಲು ಹೈಕಮಾಂಡ್ ತೀರ್ಮಾನಿಸಿದೆ. ಆಕ್ಷಾಂಕ್ಷಿಗಳಿಗೆ ಟಿಕೆಟ್ ಕೈತಪ್ಪಿದ್ದರಿಂದ ಬಂಡಾಯ ಸಹಜ. ಅವರೊಂದಿಗೆ ಚರ್ಚಿಸಿ ನಾಮಪತ್ರ ಹಿಂಪಡೆಯುವಂತೆ ಮನವೊಲಿಕೆ ಮಾಡುತ್ತೇವೆ’

-ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

ಗೆಲುವು ನಮ್ಮದೆ

ಚಿಂಚೋಳಿ ಕ್ಷೇತ್ರ ಕಾಂಗ್ರೆಸ್ ಪಕ್ಷದ ತವರು. ಇಲ್ಲಿ ಪಕ್ಷ ಅತ್ಯಂತ ಆಳವಾಗಿ ಬೇರೂರಿದೆ. ಉಮೇಶ್ ಜಾಧವ್‌ರಿಂದ ಕ್ಷೇತ್ರದಲ್ಲಿ ಮಾರಾಟ ಸಂಸ್ಕೃತಿ ಆರಂಭವಾಗಿದ್ದು, ಕ್ಷೇತ್ರದ ಹೆಸರು ಕೆಡಿಸಿದ್ದು ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಈ ಬಾರಿ ಗೆಲುವು ನಮ್ಮದೆ’

-ಸುಭಾಷ್ ರಾಠೋಡ್, ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News