‘ನ್ಯಾಯ್’ ಯೋಜನೆ ಭಾರತೀಯ ಆರ್ಥಿಕತೆಯ ಎಂಜಿನ್‌ಗೆ ಡೀಸೆಲ್ : ರಾಹುಲ್

Update: 2019-04-29 14:53 GMT

ಧೋಲ್‌ಪುರ, ಎ. 29: ಕಾಂಗ್ರೆಸ್ ಪ್ರಸ್ತಾಪಿಸಿದ ಕನಿಷ್ಠ ಆದಾಯ ಖಾತರಿ ಯೋಜನೆ ‘ನ್ಯಾಯ್’ ಭಾರತದ ಆರ್ಥಿಕತೆಯ ಎಂಜಿನ್‌ಗೆ ಡೀಸೆಲ್ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

 ರಾಜಸ್ಥಾನದ ಧೋಲಪುರ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಐದು ವರ್ಷಗಳಲ್ಲಿ 5 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ 3.60 ಲಕ್ಷ ರೂ. ಠೇವಣಿ ಮಾಡಲಿದೆ. ನರೇಂದ್ರ ಮೋದಿ ಅವರು ಜನರಿಗೆ ಬ್ಯಾಂಕ್‌ನಲ್ಲಿ ಖಾತೆ ತೆರೆಯುವಂತೆ ಸೂಚನೆ ನೀಡಿದ್ದರು. ಆದರೆ, ಆ ಖಾತೆಯಲ್ಲಿ ಒಂದೇ ಒಂದು ರೂಪಾಯಿ ಠೇವಣಿ ಮಾಡಿಲ್ಲ ಎಂದರು. ಪಕ್ಷ ಅಧಿಕಾರಕ್ಕೆ ಬಂದರೆ, ಸರಕಾರ ಒಂದು ವರ್ಷದಲ್ಲಿ 22 ಲಕ್ಷ ಯುವಕರಿಗೆ ಉದ್ಯೋಗ ಒದಗಿಸಲಿದೆ, ಪಂಚಾಯತ್‌ಗಳಲ್ಲಿ 10 ಲಕ್ಷ ಯುವಕರನ್ನು ನೇಮಕ ಮಾಡಲಿದೆ ಹಾಗೂ ಸಾಲ ಮರು ಪಾವತಿಸದ ಯಾವುದೇ ರೈತರಿಗೆ ಜೈಲು ಶಿಕ್ಷೆ ವಿಧಿಸಲಾರದು ಎಂದು ರಾಹುಲ್ ಗಾಂಧಿ ಹೇಳಿದರು.

‘‘ನಾನು ಇಲ್ಲಿಗೆ ಬಂದಿರುವುದು ಸುಳ್ಳು ಹೇಳಲು ಅಲ್ಲ. ನಮ್ಮ ನ್ಯಾಯ್ ಯೋಜನೆಯಿಂದ ಆರ್ಥಿಕತೆ ವೇಗ ಪಡೆದುಕೊಳ್ಳಲಿದೆ. ಇದು ಭಾರತೀಯ ಆರ್ಥಿಕತೆಯ ಎಂಜಿನ್‌ಗೆ ಡೀಸೆಲ್ ಆಗಲಿದೆ. ನಾವು 5 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಲ್ಲಿ 3.60 ಲಕ್ಷ ರೂಪಾಯಿ ಠೇವಣಿ ಮಾಡಲಿದ್ದೇವೆ.’’ ಎಂದು ಜಿಲ್ಲೆಯ ಸೇಪಾವುನಲ್ಲಿ ಆಯೋಜಿಸಲಾದ ರ್ಯಾಲಿಯಲ್ಲಿ ಮಾತನಾಡಿದ ಅವರು ಹೇಳಿದರು.

ನಿರುದ್ಯೋಗ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಇದೆ. 22 ಲಕ್ಷ ಸರಕಾರಿ ಉದ್ಯೋಗ ಖಾಲಿ ಇದೆ. ನಾವು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಈ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News