ಅಂಬೇಡ್ಕರ್ ಅವರ ಸಂವಿಧಾನ ಇಂದಿಗೂ ಪ್ರಸ್ತುತ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-04-29 17:37 GMT

ಬೆಂಗಳೂರು,ಎ.29: ಸಮಾಜದ ಬದಲಾವಣೆಗೆ ತಕ್ಕಂತೆ ಕಾನೂನು ಚೌಕಟ್ಟಿನಲ್ಲಿ ಸಂವಿಧಾನಕ್ಕೆ ಒಂದಷ್ಟು ತಿದ್ದುಪಡಿ ತರಲಾಗಿದೆ. ಆದರೆ ಸಂವಿಧಾನವನ್ನೇ ಬದಲಿಸಬೇಕು ಎಂಬ‌ ಕೆಲವರ ಹೇಳಿಕೆಗಳು ವೈಯಕ್ತಿಕವಾಗಿ ನೋವು ಉಂಟುಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ನಿಮ್ಹಾನ್ಸ್‌ ಸಭಾಂಗಣದಲ್ಲಿ ಆಯೋಜಿಸಿದ್ದ 128ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಇಂದಿಗೂ ಪ್ರಸ್ತುತ. ಸಮಾನತೆ ಇಲ್ಲದ ಹೊರತು ಜಿಡಿಪಿ ಎಷ್ಟೇ ಎತ್ತರಕ್ಕೆ ಹೋದರೂ ಅದು ಸಾರ್ಥಕವಾಗುವುದಿಲ್ಲ. ಆದರೆ ದುರಾದೃಷ್ಟಕರ ಎಂದರೆ ಈಗಲೂ ಶೋಷಣೆ ಮುಂದುವರೆದಿದೆ. ದಲಿತ ಮಹಿಳೆಯರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ದಲಿತರಿಗೆ ಸಮಾನತೆ ಕೊಡಿಸಲು ಮೀಸಲಾತಿ ಕೊಡಲಾಗಿದೆ. ಆದರೆ ಇದನ್ನು ಸಹ ಕೆಲವರು ಸಹಿಸುತ್ತಿಲ್ಲ ಎಂದು ಹೇಳಿದರು. 

ಈಗಿನ ಕಾಲಕ್ಕೆ ತಕ್ಕಂತೆ ಸಂವಿಧಾನಕ್ಕೆ ಕೆಲ ತಿದ್ದುಪಡಿ ತರಲಾಗಿದೆ. ಆದರೆ ಸಂವಿಧಾನವನ್ನೇ ಬದಲಿಸಿ ಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೂ ಕೆಲವೆಡೆ ಅಂಬೇಡ್ಕರ್ ಅವರ ಪ್ರತಿಮೆ ಹೊಡೆದು ಹಾಕಿ ಎಂದು ಹೇಳುತ್ತಿದ್ದಾರೆ. ಈ ರೀತಿ ಮಾಡುವುದರಲ್ಲಿ ಅರ್ಥವಿದೆಯಾ? ಅಂಬೇಡ್ಕರ್‌ ಅವರ ಸಂವಿಧಾನ ವಾಸ್ತವದಲ್ಲಿ ಅತ್ಯಂತ ಅಗತ್ಯ ಎಂಬುದನ್ನು ಇಂದಿನ ಪೀಳಿಗೆ ಅರ್ಥೈಸಿಕೊಳ್ಳಬೇಕಿದೆ. ನಾವೆಲ್ಲ ಸಂವಿಧಾನವನ್ನು ಕಾಪಾಡಿಕೊಂಡು ಸಾಗಬೇಕು ಎಂದು ಹೇಳಿದರು.

ಇಂದಿನ ಕಾಲದಲ್ಲಿಯೂ ದಲಿತದ ಮೇಲೆ ಶೋಷಣೆ ನಡೆಯುತ್ತಿದೆ. ಸರಕಾರ ಎಷ್ಟೇ ಕಾನೂನು ತಂದರೂ ಈ ಶೋಷಣೆ ನಿಲ್ಲುವುದಿಲ್ಲ.‌ ಬದಲಿಗೆ ಜನರ ಮನಸ್ಥಿತಿ ಬದಲಾಗಬೇಕು. ಆಗ ಮಾತ್ರ ಶೋಷಣೆ ನಿಂತು ಅಂಬೇಡ್ಕರ್‌ ಅವರ ಸಮಾನತೆ ಬರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News