ಶೋಷಿತ ಸಮುದಾಯದಿಂದ ದೇಶದ ಬದಲಾವಣೆ ಸಾಧ್ಯ: ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಗೋಪಾಲ್
ಚಿಕ್ಕಮಗಳೂರು, ಎ.29: ಬೇಡುವುದರಿಂದ ಮುಖ್ಯಮಂತ್ರಿ ಸ್ಥಾನ ಲಭಿಸುವುದಿಲ್ಲವೆಂದು ಪ್ರಜಾಪರಿವರ್ತನಾ ವೇದಿಕೆಯ ರಾಜ್ಯಾಧ್ಯಕ್ಷ ಬೆಂಗಳೂರಿನ ಬಿ.ಗೋಪಾಲ್ ತಿಳಿಸಿದರು.
ಕೂದುವಳ್ಳಿ ಗ್ರಾಮದ ಶಾಲಾವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ, ಸವಿತಾ ಯುವತಿ ಮಂಡಳಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ 128 ನೆಯ ಜನ್ಮದಿನಾಚರಣೆಯಲ್ಲಿ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದ ಅವರು, ಕಳೆದ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಬೇಡಿ ಪಡೆದುಕೊಳ್ಳುವಂತಾಯಿತು. ಸಿಎಂಸ್ಥಾನವನ್ನು ಬೇಡಿದರೆ ಸಿಗದು, ಪರಿಶ್ರಮದಿಂದ ಅದನ್ನು ಪಡೆದುಕೊಳ್ಳಂತಾಗಬೇಕು ಎಂದು ಹೇಳಿದರು.
ಶೋಷಿತ ಸಮುದಾಯ ದೇಶ ಆಳುವುದರಿಂದ ಬದಲಾವಣೆ ಕಾಣಲು ಸಾಧ್ಯ, ಸಂವಿಧಾನ ಬದಲಾವಣೆಯ ಮಾತುಗಳು ಕೇಳಿ ಬರುತ್ತಿದ್ದು, ಅದು ಎಂದಿಗೂ ಸಾಧ್ಯವಾಗದ ಮಾತು. ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತ ದೇಶದ ಶ್ರೇಷ್ಠ ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಅಂಬೇಡ್ಕರ್ ಜಾತಿ ಮುಕ್ತ ಸಮಾಜ ನಿರ್ಮಾಣದ ಕನಸನ್ನು ಕಂಡಿದ್ದರು. ನಾವೆಲ್ಲರೂ ಜಾತಿ ಬಿಟ್ಟು ಸಮಾಜ ಕಟ್ಟುವ ಕೆಲಸಕ್ಕೆ ಮುಂದಾದಾಗ ಮಾತ್ರ ಪರಿವರ್ತನೆ ಕಾಣಲು ಸಾಧ್ಯವೆಂದು ತಿಳಿಸಿ, ಈ ದೇಶದಲ್ಲಿ ಸ್ವಾಭಿಮಾನ, ಘನತೆ, ಗೌರವ ಸಂಪಾದಿಸಿದ ಏಕೈಕ ವ್ಯಕ್ತಿ ಅಂಬೇಡ್ಕರ್ ಎಂದು ಬಣ್ಣಿಸಿದರು.
ಈ ದೇಶದ ಜನರಿಗೆ ಅಂಬೇಡ್ಕರ್ ನೀಡಿದ ಕೊಡುಗೆಗಳನ್ನು ಬೇರೆ ಸಮುದಾಯಗಳಿಗೆ ತಿಳಿಸದೇ ಇರುವುದರಿಂದ ಮೀಸಲಾತಿ ಎಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಸೀಮಿತವಾಗಿದೆ ಎಂದು ಇತರೆ ವರ್ಗದವರು ತಿಳಿದುಕೊಳ್ಳುವಂತಾಗಿದೆ. ಅಸ್ಪೃಶ್ಯರನ್ನು ಮೇಲ್ವರ್ಗದವರ ದಮನ, ದಬ್ಬಾಳಿಕೆ, ದೌರ್ಜನ್ಯದಿಂದ ಮುಕ್ತಿಗೊಳಿಸಲು ಅಂಬೇಡ್ಕರ್ ನಡೆಸಿದ ಹೋರಾಟ ಮಾನವೀಯತೆಯ ನೆಲಗಟ್ಟಿನಲ್ಲಿತ್ತು ಎಂದರು.
ಅಂಬೇಡ್ಕರ್ ಹುಟ್ಟಿದ್ದು ಮಹಾರಾಷ್ಟ್ರದ ಅಂಬೇವಾಡಿಯಲ್ಲಲ್ಲ, ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮಹೋ ಎಂಬಲ್ಲಿ. ಗಾಢವಾಗಿ ಬೇರು ಬಿಟ್ಟಿದ್ದ ಅಸ್ಪೃಶ್ಯತೆಯ ನಡುವೆಯೂ ಚೌಡರಕೆರೆ ನೀರನ್ನು ಮುಟ್ಟುವ ತಾಕತ್ತು ಇದ್ದದ್ದು ಅಂಬೇಡ್ಕರ್ ಗೆ ಮಾತ್ರ ಎಂದು ನುಡಿದರು.
ದುಂಡುಮೇಜಿನ ಪರಿಷತ್ತಿನಲ್ಲಿ ಶೋಷಿತ ವರ್ಗವನ್ನು ಅಂಬೇಡ್ಕರ್ ಪ್ರತಿನಿಧಿಸಿದ್ದರು. ಆದರೆ ಆ ಸಮುದಾಯದ ಮುಖಂಡ ತಾವೆಂದು ಗಾಂಧೀಜಿ ಹೇಳಿದಾಗ ಅದಾದ 15 ದಿವಸಗಳ ನಂತರ ನಡೆದ ಸಭೆಯಲ್ಲಿ ನಿಜವಾದ ಮುಖಂಡ ಯಾರೆಂಬುದನ್ನು ಅಂಬೇಡ್ಕರ್ ಸಾಬೀತು ಪಡಿಸಿದರೆಂದು ಹೇಳಿದರು. ಸಂವಿಧಾನ ರಚನಾ ಸಮಿತಿಗೆ ಆಯ್ಕೆಯಾಗುವಾಗ ಎದುರಾದ ಎಡರು ತೊಡರುಗಳನ್ನು ಬಗೆಹರಿಸಿಕೊಂಡ ಬಗ್ಗೆ ವಿವರಿಸಿ, ಈ ದೇಶಕ್ಕೆ ಸಂವಿಧಾನ ರಚಿಸಿದ ಅಂಬೇಡ್ಕರ್ ನಿಧನರಾದಾಗ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಸೂಕ್ತ ಜಾಗ ನೀಡುವಲ್ಲಿ ಆಗಿನ ಸರ್ಕಾರ ವಿಫಲವಾಗಿತ್ತೆಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಶೋಷಿತ ವರ್ಗವನ್ನು ಸಮಾಜದ ಮೇಲ್ಪಂಕ್ತಿಗೆ ತರುವಲ್ಲಿ ಸರ್ಕಾರಗಳು ವಿಫಲವಾದ ಪರಿಣಾಮ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಉದಯವಾಗಲು ಕಾರಣವಾಯಿತು. ಈಗ ಆ ಸಮಿತಿಗಳು ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಿ, ಜಾತ್ಯಾತೀತರನ್ನು ಬೆಂಬಲಿಸಿರುವ ಮನಸ್ಥಿತಿಗಳು ಅಂಬೇಡ್ಕರ್ ಕುರಿತು ಸರಿಯಾಗಿ ಅಧ್ಯಯನ ಮಾಡಬೇಕಾಗಿದೆ. ಇಂದಿನ ಯುವಜನರು ಅಂಬೇಡ್ಕರ್ ಅಭಿಮಾನಿಗಳಾಗುವ ಬದಲು ಅನುಯಾಯಿಗಳಾಗಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಕೆ.ಡಿ.ರಾಜೇಶ್ ವಹಿಸಿದ್ದರು. ಗ್ರಾಮದ ಅಧ್ಯಕ್ಷ ಕೆ.ಎಂ.ಮಂಜುನಾಥ್ ಅಂಬೇಡ್ಕರ್ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು. ಶಾಸಕ ಬಿ.ಬಿ.ನಿಂಗಯ್ಯ, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹಿರಗಯ್ಯ, ಮಹಿಳಾ ಕಾಂಗ್ರೆಸ್ ನಯನಾ ಮೋಟಮ್ಮ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷ ಲಕ್ಷ್ಮಣಗೌಡ, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಸುಬ್ಬೇಗೌಡ, ಮಹಿಳಾ ಮಂಡಳಿ ಅಧ್ಯಕ್ಷೆ ಕಾವ್ಯ, ಸಂಘದ ಉಪಾಧ್ಯಕ್ಷ ಸಂತೋಷ್, ಪರಿವರ್ತನಾ ವೇದಿಕೆಯ ಬಸವರಾಜ್, ಪ್ರೇಮ್ ಕುಮಾರ್, ದಲಿತ ಮುಖಂಡ ರಾಜರತ್ನಂ ಇದ್ದರು. ಸಂಘದ ಸದಸ್ಯ ಲೋಕೇಶ್ ವಿಷಯ ಪ್ರಸ್ತಾವಿಸಿದ್ದು, ಚೇತನ್ ಕುಮಾರ್ ಸ್ವಾಗತಿಸಿ, ಚೆಲುವರಾಜ್ ಮತ್ತು ಅಶ್ವಿನಿ ನಿರೂಪಿಸಿ, ಗೋಪಾಲ್ ವಂದಿಸಿದರು.
ಮೆರವಣಿಗೆ: ಮಧ್ಯಾಹ್ನ ಪುಷ್ಪಾಲಂಕೃತ ತೆರೆದ ವಾಹನದಲ್ಲಿ ಗ್ರಾಮದ ಮುಖ್ಯಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುವ ಶಾಲಾವರಣಕ್ಕೆ ಕೊಂಡೊಯ್ಯಲಾಯಿತು.
ಸನ್ಮಾನ: ಗ್ರಾಮದ ಮುಖಂಡರಾದ ರಾಮಯ್ಯ, ರಾಮಸ್ವಾಮಿ, ಮಂಜಯ್ಯ, ನೌಕರ ನಿಂಗಯ್ಯ, ನಿವೃತ್ತ ಶಿಕ್ಷಕ ಹರಿಯಪ್ಪ, ಗಾಯಕ ಅಮ್ಮಾ ರಾಮಚಂದ್ರ, ದಲಿತ ಸಂಘದ ಮುಖಂಡ ರಾಜರತ್ನಂ, ಉಪನ್ಯಾಸ ನೀಡಿದ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.