ಹಿಮಾಲಯ ಏರಲು ಹಾಡಿಯಿಂದ 12 ವಿದ್ಯಾರ್ಥಿನಿಯರ ಆಯ್ಕೆ: ಮೇ 2 ರಂದು ಪ್ರಯಾಣ

Update: 2019-04-29 18:21 GMT

ಮೈಸೂರು,ಎ.29: ಕಾಡೇ ಪ್ರಪಂಚ ಎಂದುಕೊಂಡು ಕಾಲ ಕಳೆಯುತ್ತಿದ್ದ ವಿದ್ಯಾರ್ಥಿಗಳಿಗೆ ಹಿಮಾಲಯ ಏರುವ ಭಾಗ್ಯ ಒಲಿದು ಬಂದಿದೆ.

ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆಯ ವಿವೇಕ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿಗಳಿಗೆ ಟೈಗರ್ ಅಡ್ವೆಂಚರ್ ಫೌಂಡೇಷನ್ ಚಾರಣ, ಲೇಡಿಸ್ ಸರ್ಕಲ್ ಇಂಡಿಯಾ ವತಿಯಿಂದ ಹಿಮಾಲಯ ಚಾರಣ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಹಿಮಾಚಲ ಪ್ರದೇಶದ ದೌಲಾರ್ಧ ರೇಂಜ್‍ನ 14,000 ಅಡಿ ಎತ್ತರದ ಸೌರ್ಕುಂಡ ಪಾಸ್ ಶಿಖರಕ್ಕೆ ಹಾಡಿ ಮಕ್ಕಳು ತೆರಳಲಿದ್ದಾರೆ.

ಹಿಮಾಲಯ ಏರಲು ಹಾಡಿಯಿಂದ 12 ವಿದ್ಯಾರ್ಥಿನಿಯರು ಹೊರಟು ನಿಂತಿದ್ದಾರೆ. ಅವರ ಜೊತೆ ಇಬ್ಬರು ಲೇಡಿ ಸ್ಟಾಫ್ಸ್, ಒಬ್ಬರು ವಿವೇಕ ಬುಡಕಟ್ಟು ಕೇಂದ್ರದ ಪ್ರಾಧ್ಯಾಪಕರು ಯಾತ್ರೆಗೆ ಹೊರಡಲಿದ್ದಾರೆ. ಹಿಮಾಲಯ ಚಾರಣಕ್ಕಾಗಿ ಹಾಡಿ ವಿದ್ಯಾರ್ಥಿಗಳಿಗೆ ಕಳೆದ ವರ್ಷ ನವೆಂಬರ್ ನಿಂದಲೇ ಟೈಗರ್ ಅಡ್ವೆಂಚರ್ ಫೌಂಡೇಷನ್ ನುರಿತರಿಂದ ತರಬೇತಿ ನೀಡಲಾಗಿದೆ. ಮೇ.2 ರಂದು ಬುಡಕಟ್ಟು ವಿದ್ಯಾರ್ಥಿಗಳು ಮೈಸೂರಿನಿಂದ ಹಿಮಾಲಯಕ್ಕೆ ಪಯಣ ಬೆಳಸಲಿದ್ದಾರೆ. 9 ಬಾರಿ ಹಿಮಾಲಯ ಚಾರಣ ಮಾಡಿ ಅನುಭವ ಹೊಂದಿರುವ 9 ನೇ ತರಗತಿ ವಿದ್ಯಾರ್ಥಿನಿ ರಿಯಾ ಸೋಲಂಕಿ ಆಶಾ 2019 ರ ತಂಡವನ್ನು ಮುನ್ನಡೆಸಲಿದ್ದಾರೆ.

8.5 ಲಕ್ಷ ವೆಚ್ಚದಲ್ಲಿ ಕೈಗೊಂಡಿರುವ ಹಿಮಾಲಯ ಚಾರಣ ಸಾಹಸಿ ಯಾತ್ರೆಗೆ 131 ಮಂದಿ ಕೈ ಜೋಡಿಸಿದ್ದಾರೆ. 7 ದೇಶ, 9 ರಾಜ್ಯಗಳ ಸಹಾಯ ಹಸ್ತದೊಂದಿಗೆ ಮೇ.13 ರಂದು ಸೌರ್ಕುಂಡ್ ಪಾಸ್ ಶಿಖರ ಏರಲಿದ್ದಾರೆ. ಮೇ.2ರಂದು ಒಂಟಿ ಕೊಪ್ಪಲಿನಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಹಿಮಾಲಯ ಚಾರಣ ಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ಟೈಗರ್ ಅಡ್ವೆಂಚರ್ ಫೌಂಡೇಶನ್ ಅಧ್ಯಕ್ಷ ಡಿ.ಎಸ್.ಡಿ.ಸೋಲಂಕಿ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News