ಎಸ್ಸೆಸ್ಸೆಲ್ಸಿ ಫಲಿತಾಂಶ: ವಿಜಯಪುರ ಜಿಲ್ಲೆ ಫಲಿತಾಂಶದಲ್ಲಿ ತೀವ್ರ ಕುಸಿತ
ವಿಜಯಪುರ: ಕಳೆದ ಬಾರಿ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಶೇ.83.23 ರಷ್ಟು ಫಲಿತಾಂಶದಿಂದ 9 ನೇ ಸ್ಥಾನ ಪಡೆಯುವ ಮೂಲಕ ಟಾಪ್‍ಟೆನ್‍ನಲ್ಲಿ ಸ್ಥಾನ ಪಡೆದಿದ್ದ ವಿಜಯಪುರ ಜಿಲ್ಲೆ ಶೇ. 77.36 ಪಡೆದು ಈ ಬಾರಿ ಭಾರೀ ಕುಸಿತಗೊಂಡಿದ್ದು, 25 ನೇ ಸ್ಥಾನಕ್ಕೆ ತಲುಪಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 17724 ಬಾಲಕರು, 13904 ಬಾಲಕಿಯರು ಸೇರಿದಂತೆ ಒಟ್ಟು 31628 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 1320 ಮಕ್ಕಳು ಪರೀಕ್ಷೆಗೆ ಗೈರು ಉಳಿದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಗೈರಾದ ವಿದ್ಯಾರ್ಥಿಗಳಿಂದಾಗಿಯೂ ಫಲಿತಾಂಶ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಪ್ರಸಕ್ತ ವರ್ಷಕ್ಕೆ ಸಿಬಿಎಸ್‍ಇ ಪಠ್ಯ ಆಧರಿತ ಪ್ರಶ್ನೆ ಪತ್ರಿಕೆ ರೂಪಿಸಿದ್ದರಿಂದಾಗಿ ಬಹುತೇಕ ಮಕ್ಕಳಿಗೆ ಹೊಸ ಪ್ರಶ್ನೆ ಪತ್ರಿಕೆ ಅರ್ಥವಾಗಲಿಲ್ಲ. ಆದಾಗ್ಯೂ ಇಲಾಖೆ ಅಧಿಕಾರಿಗಳು ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ತೋರಿಸಿದ್ದರು. ಇನ್ನೊಂದೆಡೆ ಕಳೆದ ವರ್ಷ ಬಹುಆಯ್ಕೆಯ ಪ್ರಶ್ನೆಗಳಿದ್ದವು. ಆದರೆ ಈ ಬಾರಿ ಅದಿಲ್ಲದ್ದರಿಂದಾಗಿ ಮಕ್ಕಳು ಇಡೀ ಪುಸ್ತಕ ಓದಬೇಕಾಗಿತ್ತು ಇದರಿಂದಾಗಿಯೂ ಫಲಿತಾಂಶ ಕುಸಿಯಲು ಕಾರಣ ಎನ್ನುತ್ತಾರೆ ಶಿಕ್ಷಕರು ಹಾಗೂ ಅಧಿಕಾರಿಗಳು.
ಫಲಿತಾಂಶ ಸುಧಾರಣೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅನೇಕ ಪ್ರಯತ್ನಗಳನ್ನು ಕೈಗೊಂಡಿದೆ. ಟಾಪ್‍ಟೆನ್‍ನಲ್ಲಿ ಜಿಲ್ಲೆಯ ಫಲಿತಾಂಶ ತರುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದ್ದರು. ಮಕ್ಕಳಿಗೆ ವಿಶೇಷ ತರಗತಿಗಳು, ಗುಂಪು ಚರ್ಚೆ, ಪಾಸ್ಸಿಂಗ್ ಪ್ಯಾಕೇಜ್ ಸೇರಿದಂತೆ ಇಲಾಖೆ ಮಾರ್ಗಸೂಚಿಗಳನ್ನು ಕಟ್ಟು-ನಿಟ್ಟಾಗಿ ಪಾಲಿಸುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಆದರೆ ಸಿಬಿಎಸ್‍ಇ ಪಠ್ಯಕ್ರಮ ಆಧರಿಸಿ ಹೊಸದಾಗಿ ರಚಿಸಲಾದ ಪ್ರಶ್ನೆಪತ್ರಿಕೆ ಗೊಂದಲ ಮಕ್ಕಳನ್ನು ಬಾಧಿಸಿದ್ದರಿಂದಾಗಿ ಫಲಿತಾಂಶ ಕುಸಿಯಲು ಕಾರಣ ಎನ್ನಲಾಗುತ್ತಿದೆ.
ಫಲಿತಾಂಶ ಸುಧಾರಣೆಗಾಗಿ ವರ್ಷದುದ್ದಕ್ಕೂ ವಿಶೇಷ ತರಗತಿಗಳು, ಗುಂಪು ಚರ್ಚೆ, ಪಾಸ್ಸಿಂಗ್ ಪ್ಯಾಕೇಜ್, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳನ್ನು ದತ್ತು ಸ್ವೀಕರಿಸಿ ವಿಶೇಷ ವರ್ಗಗಳ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸನ್ನದ್ದಗೊಳಿಸಿದ್ದೇವು. 1320 ಮಕ್ಕಳು ಪರೀಕ್ಷೆಗೆ ಗೈರು ಉಳಿದಿದ್ದರಿಂದಾಗಿಯೂ ಫಲಿತಾಂಶ ಕುಸಿತಕ್ಕೆ ಕಾರಣ ಎಂಬುದು ಡಿಡಿಪಿಐ ಪ್ರಸನ್ನಕುಮಾರ ವಿಶ್ಲೇಷಣೆ ನೀಡಿದರು.