ಜೂ.21 ರಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ

Update: 2019-04-30 12:18 GMT

ಬೆಂಗಳೂರು, ಎ.30: ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜೂ.21 ರಿಂದ ಪೂರಕ ಪರೀಕ್ಷೆಗಳು ನಡೆಯಲಿವೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದ್ದಾರೆ.

ನಗರದಲ್ಲಿಂದು ಎಸೆಸೆಲ್ಸಿ ಫಲಿತಾಂಶ ಪ್ರಕಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 2 ರಿಂದ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಮೇ 10 ರಂದು ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ. 200 ರೂ.ಗಳ ದಂಡ ಶುಲ್ಕದೊಂದಿಗೆ ಮೇ 15 ರವರೆಗೂ ಅವಕಾಶವಿರುತ್ತದೆ. ಮರು ಪರೀಕ್ಷೆಗೆ ಒಂದು ವಿಷಯಕ್ಕೆ 290, ಎರಡು ವಿಷಯಕ್ಕೆ 350 ಹಾಗೂ ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 470 ರೂ.ಗಳನ್ನು ಪಾವತಿ ಮಾಡಬೇಕು ಎಂದು ಹೇಳಿದರು.

ಮರು ಮೌಲ್ಯ ಮಾಪನ: ಕಡಿಮೆ ಅಂಕಗಳನ್ನು ಪಡೆದಿರುವ ಅಥವಾ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮರು ಮೌಲ್ಯಮಾನಕ್ಕೆ ಅರ್ಜಿ ಸಲ್ಲಿಸಲು ಮೇ 17 ರವರೆಗೂ ಅವಕಾಶವಿರುತ್ತದೆ. ಮೇ 2 ರಿಂದ ಪರೀಕ್ಷೆಯ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಬಹುದು.

ಮೇ 13 ರಂದು ಸ್ಕ್ಯಾನ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಮೇ 6 ರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಪ್ರಾರಂಭವಾಗಲಿದ್ದು, ಮೇ 17 ರಂದು ಕೊನೆಯ ದಿನಾಂಕವಾಗಿರುತ್ತದೆ. ಅಭ್ಯರ್ಥಿಗಳು ಛಾಯಾ ಪ್ರತಿಯನ್ನು ಪಡೆಯಲು ಒಂದು ವಿಷಯಕ್ಕೆ 405 ರೂ. ಗಳು ಹಾಗೂ ಮರು ಮೌಲ್ಯಮಾಪನಕ್ಕೆ 805 ರೂ.ಗಳು ಪಾವತಿಸಬೇಕು ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News