ಎಸೆಸೆಲ್ಸಿ ಫಲಿತಾಂಶ: ಸರಕಾರಿ ಶಾಲೆಗಳ ಉತ್ತಮ ಸಾಧನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹರ್ಷ

Update: 2019-04-30 12:51 GMT

ಬೆಂಗಳೂರು, ಎ. 30: ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದ ಸರಕಾರಿ ಶಾಲೆಗಳು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದಕ್ಕೆ ಮುಖ್ಯಮಂತ್ರಿ ಕಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.

ಸರಕಾರಿ ಶಾಲೆಗಳ ಮಕ್ಕಳು ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ಅತ್ಯುತ್ತಮ ಸಾಧನೆ ತೋರಬಲ್ಲರು ಎಂಬುದಕ್ಕೆ ಇದು ನಿದರ್ಶನ. ಯಾವುದೇ ಸರಕಾರಿ ಶಾಲೆ ಶೂನ್ಯ ಫಲಿತಾಂಶ ದಾಖಲಿಸದೆ ಇರುವುದು ಹಾಗೂ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 102ರಿಂದ 593ಕ್ಕೆ ಹೆಚ್ಚಳವಾಗಿರುವುದು ಹೆಮ್ಮೆಯ ವಿಷಯವಾಗಿದೆ.

ಪೋಷಕರು ಸರಕಾರಿ ಶಾಲೆಗಳ ಕುರಿತು ಕೀಳರಿಮೆ ತೊಡೆದು ಒಲವು ತೋರಿಸಲು ಇದು ಪೂರಕವಾಗಿದೆ. ಸರಕಾರಿ ಶಾಲೆಗಳಲ್ಲಿ ಫಲಿತಾಂಶ ಉತ್ತಮ ಪಡಿಸಲು ಅಧಿಕಾರಿಗಳು ಕೈಗೊಂಡ ಕ್ರಮಗಳು ಫಲ ನೀಡಿದೆ ಎಂದು ಮುಖ್ಯಮಂತ್ರಿ ಕಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನುತ್ತೀರ್ಣರಾದವರಿಗೆ ಸಾಂತ್ವನ: ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಕಳೆದ ವರ್ಷಕ್ಕಿಂತ ತುಸು ಹೆಚ್ಚಾಗಿರುವುದು ಸಂತೋಷದ ವಿಷಯ. ಸಾಧನೆ ಮಾಡಿದ ವಿದ್ಯಾರ್ಥಿಗಳು-ಶಾಲೆಗಳಿಗೆ ಅಭಿನಂದನೆಗಳು. ಅನುತ್ತೀರ್ಣರಾದ ವಿದ್ಯಾರ್ಥಿಗಳು ನಿರಾಸೆ ಹೊಂದುವ ಅಗತ್ಯವಿಲ್ಲ. ಮುಂದಿನ ಬಾರಿ ಹೆಚ್ಚಿನ ಪರಿಶ್ರಮ ವಹಿಸಿ ಪರೀಕ್ಷೆ ಎದುರಿಸಿ ಯಶಸ್ವಿಯಾಗಿ ಎಂದು ಕುಮಾರಸ್ವಾಮಿ ಧೈರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಫಲಿತಾಂಶ ತ್ವರಿತವಾಗಿ ಪ್ರಕಟವಾಗುವ ಮೂಲಕ ಪೋಷಕರು ಹಾಗೂ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಇಡಿ ಪರೀಕ್ಷಾ ಪ್ರಕ್ರಿಯೆಯನ್ನು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಯಶಸ್ವಿಯಾಗಿ ನಿರ್ವಹಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿ ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ತಂತ್ರಜ್ಞಾನದ ನೆರವು ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ದೊರೆತಾಗ ಪರಿಣಾಮಕಾರಿ ಕಾರ್ಯನಿರ್ವಹಣೆ ಸಾಧ್ಯ ಎನ್ನುವುದಕ್ಕೆ ಈ ವರ್ಷದ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಪ್ರಕ್ರಿಯೆ ನಿರ್ವಹಣೆ ಉತ್ತಮ ನಿದರ್ಶನ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News