ರಾಜ್ಯದಲ್ಲಿ ಶಿಕ್ಷಣ ಸಚಿವರು ಇಲ್ಲದಿರುವುದು ನಾಚಿಕೆಗೇಡು: ಎಚ್.ವಿಶ್ವನಾಥ್
ಬೆಂಗಳೂರು, ಎ.30: ಕಳೆದ 6ತಿಂಗಳಿಂದ ರಾಜ್ಯದಲ್ಲಿ ಶಿಕ್ಷಣ ಸಚಿವರು ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿಷಾದಿಸಿದ್ದಾರೆ.
ಮಂಗಳವಾರ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಸಮಿತಿ ನಗರದ ಎಸ್‌ಸಿಎಂ ಸಭಾಂಗಣದಲ್ಲಿ ರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನದ ಪ್ರಯುಕ್ತ ‘ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ಶಿಕ್ಷಣ ಹಕ್ಕಿನ ಪಾತ್ರ’ದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣ ಕೊಡಬೇಕಾಗಿರುವುದು ಸರಕಾರದ ಮೂಲಭೂತ ಹಕ್ಕು. ಆದರೆ, ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಬೇಕಾದ ಶಿಕ್ಷಣ ಸಚಿವರೆ ಇಲ್ಲವಾಗಿದ್ದಾರೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ವಿದ್ಯಾರ್ಥಿಗಳ ಯೋಗಕ್ಷೇಮಗಳು ಬೇಕಾಗಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಪ್ರಾಥಮಿಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ರೂಪಿಸಲಾಯಿತು. ಆದರೆ, ಇದನ್ನು ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯಗಳು ಸಂಪೂರ್ಣವಾಗಿ ನಿರ್ಲಕ್ಷವಹಿಸಿವೆ ಎಂದು ಅವರು ವೇದಿಕೆಯಲ್ಲಿಯೆ ಧಿಕ್ಕಾರ ಕೂಗಿದರು.
ವಿಧಾನಪರಿಷತ್‌ನಲ್ಲಿ ಶಿಕ್ಷಣ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ 14ಸದಸ್ಯರಿದ್ದಾರೆ. ಆದರೆ, ಅವರ್ಯಾರು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದಿಲ್ಲ. ಬದಲಿಗೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಕೊಡಿಸುವುದು, ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ನೆರವಾಗುವುದು ಸೇರಿದಂತೆ ಕೇವಲ ಶಿಕ್ಷಕರ ಸಮಸ್ಯೆಗಳ ಕುರಿತು ಮಾತ್ರ ಮಾತನಾಡುತ್ತಾರೆ. ಇವರಿಂದ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಯಾವುದೆ ಪ್ರಯೋಜನವಾಗುತ್ತಿಲ್ಲವೆಂದು ಅವರು ತಿಳಿಸಿದರು.
ಸರಕಾರಿ ಶಾಲೆಗಳಲ್ಲಿ ಬಡವರು, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಮಕ್ಕಳೇ ಹೆಚ್ಚಾಗಿ ಓದುತ್ತಿದ್ದಾರೆ. ಹೀಗಾಗಿಯೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಈ ವಿದ್ಯಾರ್ಥಿಗಳ ಕುರಿತು ನಿರ್ಲಕ್ಷಭಾವನೆ ಮನೆ ಮಾಡಿದೆ. ಪರೋಕ್ಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ಇಂತಹ ಉದಾಸೀನ, ಸ್ವಾರ್ಥ ಅಧಿಕಾರಿಗಳ ಪಾತ್ರ ದೊಡ್ಡದಿದೆ ಎಂದು ಅವರು ಆಪಾದಿಸಿದರು.
ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೆ ಕಾರ್ಮಿಕ ಇಲಾಖೆಯಲ್ಲಿ ಸಾಕಷ್ಟು ಅನುದಾನ ಮೀಸಲಿದೆ. ಆದರೆ, ಅಧಿಕಾರಿಗಳು ಈ ಕುರಿತು ಯಾವುದೆ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ಇಲಾಖೆಯ ಅಧಿಕಾರಿಗಳು, ಸಚಿವರು ಮಕ್ಕಳ ಬೆಳವಣಿಗೆಗೆ ಪೂರಕವಾಗಿ ರೂಪಿಸಬಹುದಾದ ಕಾರ್ಯಕ್ರಮಗಳ ಕುರಿತು ತಿಳಿಯುವಂತಹ, ಅರಿಯುವಂತಹ ಗೋಜಿಗೆ ಹೋಗುವುದಿಲ್ಲ ಎಂದು ಅವರು ಆರೋಪಿಸಿದರು.
ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಮಾತನಾಡಿ, ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಕಾನೂನು ತಿದ್ದುಪಡಿ ತಂದು 10ವರ್ಷ ಕಳೆದಿದೆ. ಆದರೆ, ಇದರ ಸಂಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ. ಇಂದಿಗೂ ರಾಜ್ಯದಲ್ಲಿ ಸುಮಾರು 70ಸಾವಿರ ಮಕ್ಕಳ ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಆಂದೋಲನದ ರಾಷ್ಟ್ರೀಯ ಸಂಚಾಲಕ ಜೋಸೆಫ್ ವಿಕ್ಟರ್ ರಾಜ್, ತೆಲಂಗಾಣದ ರಾಜ್ಯ ಸಂಚಾಲಕ ಮುರಳಿ ಮೋಹನ್, ತಮಿಳುನಾಡಿನ ರಾಜ್ಯ ಸಂಚಾಲಕ ಕೆ.ಮೂರ್ತಿ, ಕೇರಳದ ರಾಜ್ಯ ಸಂಚಾಲಕ ಸಿ.ಕೆ.ದೇನೇಶನ್, ಸಾರ್ವಜನಿಕ ನೀತಿ ನಿರೂಪಣಾ ಸಂಸ್ಥೆಯ ಮುಖ್ಯಸ್ಥ ಪ್ರೊ.ಬಾಬು ಮ್ಯಾಥ್ಯು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಲೆಯಿಂದ ಹೊರಗುಳಿದಿರುವ 14ವರ್ಷದೊಳಗಿನ ಮಕ್ಕಳನ್ನು ಬಾಲ ಕಾರ್ಮಿಕರೆಂದು ಪರಿಗಣಿಸಿ, ಇದರ ನಿವಾರಣೆಗೆ ಕಂಕಣ ಬದ್ಧರಾಗಬೇಕು. ಈ ನಿಟ್ಟಿನಲ್ಲಿ ಸಂಸ್ಥ, ಸಂಸ್ಥೆಗಳು, ಪೋಷಕವರ್ಗ ಹಾಗೂ ಸರಕಾರದ ಜೊತೆಗೂಡಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಪ್ರತಿಯೊಂದು ಮಗುವು ಶಾಲೆಗೆ ದಾಖಲಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.
-ಡಾ.ನಿರಂಜನಾರಾಧ್ಯ, ಶಿಕ್ಷಣ ತಜ್ಞ