ದುರುದ್ದೇಶದಿಂದ ಹೇಮಂತ್ ಕುಮಾರ್ ಬಂಧನ: ಶೋಭಾ ಕರಂದ್ಲಾಜೆ

Update: 2019-04-30 12:40 GMT

ಬೆಂಗಳೂರು, ಎ.30: ವೀರಶೈವ ಲಿಂಗಾಯತ ಧರ್ಮವನ್ನು ವಿಭಜಿಸಲು ಪ್ರಯತ್ನಿಸಿದ್ದು ಗೃಹ ಸಚಿವ ಎಂ.ಬಿ.ಪಾಟೀಲ್. ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಿತೈಷಿ ಹಾಗೂ ಕಾರ್ಯಕರ್ತ ಹೇಮಂತ್ ಕುಮಾರ್‌ರನ್ನು ದುರುದ್ದೇಶದಿಂದ ಬಂಧನ ಮಾಡಿ, ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದರು.

ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಎಂ.ಬಿ.ಪಾಟೀಲ್ ಪತ್ರಕ್ಕೂ, ಹೇಮಂತ್ ಕುಮಾರ್‌ಗೂ ಯಾವುದೇ ಸಂಬಂಧವಿಲ್ಲ. 2018ರಲ್ಲಿ ಎಂ.ಬಿ.ಪಾಟೀಲ್, ಸೋನಿಯಾಗಾಂಧಿಗೆ ಬರೆದಿದ್ದ ಪತ್ರ, ಈ ಹಿಂದೆಯೇ ಸೋರಿಕೆ ಆಗಿದ್ದರೆ, ಆಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತಿತ್ತು ಎಂದು ಅವರು ಹೇಳಿದರು.

ಹೇಮಂತ್ ಕುಮಾರ್ ಯಾವುದೋ ಗ್ರೂಪ್‌ನಲ್ಲಿ ಬಂದ ಪತ್ರದ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ. ಎಂ.ಬಿ.ಪಾಟೀಲ್ ತಾವು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು, ಹೇಮಂತ್ ಕುಮಾರ್‌ರನ್ನು ಬಂಧನಕ್ಕೊಳಪಡಿಸಿದ್ದಾರೆ. ಪೊಲೀಸರು ಸರಕಾರದ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ದೂರಿದರು.

ಹೇಮಂತ್ ಕುಮಾರ್ ಕಳೆದ 5 ದಿನಗಳಿಂದ ಸಿಓಡಿ ಪೊಲೀಸರ ವಶದಲ್ಲಿದ್ದಾರೆ. ನಾನು ಅವರನ್ನು ಇಂದು ಭೇಟಿಯಾಗಿದ್ದೇನೆ. ಅವರು ನಿರಪರಾಧಿಯಾಗಿದ್ದು, ಆದಷ್ಟು ಬೇಗ ಹೊರಗೆ ಬರುತ್ತಾರೆ. ನಮಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News