ಆಪರೇಷನ್ ಕಮಲಕ್ಕೆ ತಿರುಗೇಟು: ಜೆಡಿಎಸ್ ಶಾಸಕರದ್ದು ಎನ್ನಲಾದ ಆಡಿಯೋ ವೈರಲ್

Update: 2019-04-30 14:16 GMT

ಬೆಂಗಳೂರು, ಎ. 30: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಿಸಲು ತೆರೆಮರೆಯಲ್ಲಿ ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಮುಂದಾಗಿದ್ದು, ಇದಕ್ಕೆ ತಿರುಗೇಟು ನೀಡಲು ಜೆಡಿಎಸ್ ಶಾಸಕರೊಬ್ಬರು ನಡೆಸಿದ್ದಾರೆನ್ನಲಾದ ಆಡಿಯೋ ಸಂಭಾಷಣೆಯೊಂದು ವೈರಲ್ ಆಗಿದೆ.

ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರದ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ್, ಶಿವಾಜಿ ಮೆಟಗಾರ್ ಎಂಬವರ ಜೊತೆಗೆ ಮಾತನಾಡಿದ್ದು, ಬಾಗಲಕೋಟೆ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರು ಕಾಂಗ್ರೆಸ್ ಸೇರಲಿದ್ದಾರೆಂಬ ಆಡಿಯೋ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ್ ನಡುವೆ ಉತ್ತಮ ಸಂಬಂಧವಿದೆ. ಒಂದು ವೇಳೆ ಎಂ.ಬಿ.ಪಾಟೀಲ್, ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬರುವಂತೆ ಸೋಮನಗೌಡ ಅವರಿಗೆ ತಿಳಿಸಿದರೆ, ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗುವ ಶಾಸಕರ ಪಟ್ಟಿಯಲ್ಲಿ ಸೋಮನಗೌಡ ಪಾಟೀಲ್ ಹೆಸರು ಮೊದಲಿಗೆ ಇದೆ ಎಂದು ದೇವಾನಂದ ಚವ್ಹಾಣ್ ಹೇಳಿದ್ದಾರೆಂದು ಗೊತ್ತಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ್, ‘ವೈರಲ್ ಆಗಿರುವ ಆಡಿಯೋ ಸಂಭಾಷಣೆ ನನ್ನದೆ. ಆದರೆ, ಅದರಲ್ಲಿ ಕೆಲವನ್ನು ಎಡಿಟ್ ಮಾಡಲಾಗಿದೆ. ನಾನು ಮಾತನಾಡದೆ ಇರುವ ವಿಚಾರಗಳನ್ನು ಸೇರಿಸಿದ್ದು ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಿಲ್ಲ. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ’ ಎಂದು ಸ್ಪಷ್ಟಣೆ ನೀಡಿದ್ದಾರೆ.

‘ನಾನೂ ಪಕ್ಷದ ಕಾರ್ಯಕರ್ತರು ಸೇರಿದಂತೆ ಯಾರೊಬ್ಬರ ಬಳಿಯೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮಾತೇ ಆಡಿಲ್ಲ. ಪಕ್ಷಕ್ಕೆ ದ್ರೋಹ ಮಾಡಿದರೆ ತಾಯಿಗೆ ದ್ರೋಹ ಮಾಡಿದಂತೆ. ಹೀಗಾಗಿ ನಾನು ಬಿಜೆಪಿ ತ್ಯಜಿಸುವ ಪ್ರಶ್ನೆಯೇ ಇಲ್ಲ’
-ಸೋಮನಗೌಡ ಪಾಟೀಲ್, ಬಿಜೆಪಿಯ ದೇವರಹಿಪ್ಪರಗಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News