ಮಂಡ್ಯದಲ್ಲಿ ಎಲ್ಲರನ್ನೂ ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು: ಸಚಿವ ಝಮೀರ್ ಅಹ್ಮದ್
ಬೆಂಗಳೂರು, ಎ.30: ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮ್ಮ ಮಗನನ್ನು ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಲ್ಲ ಮಾಜಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ, ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದರು.
ಆರು ತಿಂಗಳ ಹಿಂದೆಯಷ್ಟೇ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡರನ್ನು ಕಣಕ್ಕಿಳಿಸುವ ಸಂಬಂಧ ಎಲ್ಲರ ಜೊತೆ ಚರ್ಚೆ ನಡೆಸಲಾಗಿತ್ತು. ಇದರ ಪರಿಣಾಮವಾಗಿ ಶಿವರಾಮೇಗೌಡ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸುವಾಗ ಆ ಕೆಲಸವನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಅವರು ಹೇಳಿದರು.
ನಮ್ಮ ಜೊತೆ ಮೂಲ ಕಾಂಗ್ರೆಸ್‌ನವರು ಇದ್ದರೆ ಸಾಕು, ಬೆನ್ನಿಗೆ ಚೂರಿ ಹಾಕುವವರು ಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದರಿಂದ ಸಹಜವಾಗಿಯೇ, ಚಲುವರಾಯಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರ ಮನಸ್ಸಿಗೆ ನೋವುಂಟು ಮಾಡಿತು. ಆದುದರಿಂದಲೇ, ಅವರು ಪ್ರಚಾರಕ್ಕೆ ಬರದೆ ಮನೆಯಲ್ಲಿದ್ದರು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಆದರೆ, ಸುಮಲತಾ ಪರವಾಗಿ ಚಲುವರಾಯಸ್ವಾಮಿ ಪ್ರಚಾರ ಮಾಡಿಲ್ಲ. ಈಗಾಗಲೇ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆದ್ದಾಗಿದೆ. ತುಮಕೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸುಮಾರು ಒಂದೂವರೆಯಿಂದ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಕನಿಷ್ಠ 22 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.