ಮಾರುವೇಷದಲ್ಲಿ ಕಲ್ಲು ಗಣಿಗಾರಿಕೆ ಸ್ಥಳದ ಮೇಲೆ ದಾಳಿ ನಡೆಸಿದ ಶಿವಮೊಗ್ಗ ತಹಶೀಲ್ದಾರ್ !

Update: 2019-04-30 14:54 GMT

ಶಿವಮೊಗ್ಗ, ಎ. 30: ಅನದಿಕೃತ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳವೊಂದರ ಮೇಲೆ ಶಿವಮೊಗ್ಗ ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರು ಮಾರುವೇಷದಲ್ಲಿ ದಾಳಿ ನಡೆಸಿ, ಅಕ್ರಮ ಪತ್ತೆ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ. 

ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಾಳಿಯ ವೇಳೆ ಎರಡು ಟ್ರ್ಯಾಕ್ಟರ್ ಹಾಗೂ ಒಂದು ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪರಿಶೀಲನಾ ಕಾರ್ಯ ಮುಂದುವರಿಸಿದ್ದಾರೆ. 

ಕಳೆದ ಹಲವು ದಿನಗಳಿಂದ ಗೆಜ್ಜೇನಹಳ್ಳಿ ಗ್ರಾಮದ ಕೃಷಿ ಜಮೀನೊಂದರಲ್ಲಿ ಸರ್ಕಾರದ ಅನುಮತಿಯಿಲ್ಲದೆ, ಕೆಲವರು ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. 

ಈ ಸಂಬಂಧ ಸಾರ್ವಜನಿಕರು ತಹಶೀಲ್ದಾರ್ ರಿಗೆ ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ ಬಿ.ಎನ್.ಗಿರೀಶ್‍ರವರು ಎರಡು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅವರ ಆಗಮನದ ವಿಷಯದ ಮಾಹಿತಿಯನ್ನು ಹೇಗೋ ಕಲೆ ಹಾಕುತ್ತಿದ್ದ ಆರೋಪಿಗಳು, ವಾಹನ ಸಮೇತ ಸ್ಥಳದಿಂದ ಪರಾರಿಯಾಗುತ್ತಿದ್ದರು. ಇದರಿಂದ ತಹಶೀಲ್ದಾರ್ ವರು ಬರಿಗೈಯಲ್ಲಿ ವಾಪಾಸ್ಸಾಗುವಂತಾಗಿತ್ತು. 

ಮಂಗಳವಾರ ಗ್ರಾಮ ಲೆಕ್ಕಿಗ ಪ್ರಭು ಎಂಬುವರೊಂದಿಗೆ ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರು ತಮ್ಮ ಗುರುತು ಪತ್ತೆಯಾಗದಂತೆ, ತಲೆಗೆ ಟವೆಲ್ ಸುತ್ತಿಕೊಂಡು ಬೈಕ್‍ನಲ್ಲಿ ಸ್ಥಳಕ್ಕೆ ತೆರಳಿದ್ದರು. ಈ ಮೂಲಕ ಸ್ಥಳದಲ್ಲಿ ಕಾರ್ಯಾಚರಿಸುತ್ತಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ, ದಂಧೆಕೋರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.

'ಸರ್ಕಾರಿ ಜಾಗವಾಗಿ ಘೋಷಣೆ' : ತಹಶೀಲ್ದಾರ್ ಎಚ್ಚರಿಕೆ
ಖಾಸಗಿ ಕೃಷಿ ಜಮೀನುಗಳಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಕಲ್ಲು, ಮರಳು ಗಣಿಗಾರಿಕೆಯಂತಹ ಕೃತ್ಯಗಳಿಗೆ ಬಳಸಿದ್ದು ಕಂಡುಬಂದರೆ ಅಂತಹ ಜಮೀನುಗಳನ್ನು ಸರ್ಕಾರಿ ಜಾಗವಾಗಿ ಘೋಷಣೆ ಮಾಡಲಾಗುವುದು. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಈ ಕಾರಣದಿಂದ ಜಮೀನು ಮಾಲೀಕರು ಎಚ್ಚರಿಕೆಯಿಂದಿರಬೇಕು. ಯಾವುದೇ ಕಾರಣಕ್ಕೂ ತಮ್ಮ ಜಮೀನುಗಳಲ್ಲಿ ಕಾನೂನುಬಾಹಿರ ಕೃತ್ಯಗಳಿಗೆ ಅವಕಾಶ ನೀಡಬಾರದು ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್‍ರವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News